August 17, 2026
Monday, August 17, 2026
spot_img

ಹಸು, ಕರುಗಳ ವಧೆ ನಿಷೇಧ ಆದೇಶಕ್ಕೆ ಸವಾಲು: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಬಕ್ರೀದ್ ಸೇರಿದಂತೆ ಯಾವುದೇ ದಿನ ಹಸು ಮತ್ತು ಕರುಗಳ ವಧೆ ಮಾಡಬಾರದು ಎಂದು ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.


ರಾಜ್ಯದ ಪಶುಸಂಗೋಪನೆ, ಹಾಲು ಉತ್ಪಾದನೆ, ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಹೈಕೋರ್ಟ್ ತನ್ನ ಅಧಿಕಾರದ ವ್ಯಾಪ್ತಿಯನ್ನು ಮೀರಿ ಆದೇಶ ನೀಡಿದೆ ಎಂದು ಸರ್ಕಾರ ವಾದಿಸಿದೆ.


ಸರ್ಕಾರದ ಪ್ರಕಾರ, ಮೂಲ ಅರ್ಜಿ ಕೊಯಂಬತ್ತೂರಿನಲ್ಲಿ ಬಕ್ರೀದ್ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಸು ವಧೆ ತಡೆಯುವ ವಿಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಹೈಕೋರ್ಟ್ ರಾಜ್ಯದಾದ್ಯಂತ ಹಸು ಮತ್ತು ಕರುಗಳ ವಧೆಗೆ ಸಂಪೂರ್ಣ ನಿಷೇಧ ವಿಧಿಸುವಂತೆ ಆದೇಶ ನೀಡಿರುವುದು ಮೂಲ ಅರ್ಜಿಯ ವ್ಯಾಪ್ತಿಯನ್ನು ಮೀರಿದ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.


ಇದಲ್ಲದೆ, ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ-1958, ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆ ಹಾಗೂ ಸಂಬಂಧಿತ ನಿಯಮಗಳು ಹಸು ವಧೆಯನ್ನು ನಿಯಂತ್ರಿಸುತ್ತವೆಯೇ ಹೊರತು ಸಂಪೂರ್ಣ ನಿಷೇಧವನ್ನು ವಿಧಿಸುವುದಿಲ್ಲ ಎಂದು ಸರ್ಕಾರ ವಾದಿಸಿದೆ. ಜೊತೆಗೆ, ಇಸ್ಲಾಂ ಧರ್ಮದಲ್ಲಿ ಹಸು ಬಲಿ ಅಗತ್ಯವೇ ಎಂಬ ಧಾರ್ಮಿಕ ವಿಚಾರಗಳ ಕುರಿತು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿರುವುದು ಪ್ರಕರಣದ ವ್ಯಾಪ್ತಿಗೆ ಸೇರದ ವಿಷಯವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಹಾಗೂ ಅಂತಿಮ ವಿಚಾರಣೆ ನಡೆಯುವವರೆಗೆ ಆ ಆದೇಶಕ್ಕೆ ತಾತ್ಕಾಲಿಕ ತಡೆ ನೀಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !