ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಲಿನಲ್ಲಿರುವ ಡಿಎಂಕೆ ನಾಯಕ ಹಾಗೂ ರಾಜ್ಯ ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ಆದೇಶವನ್ನು ಹಿಂಪಡೆಯಲು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ನಿರ್ಧರಿಸಿದ್ದಾರೆ.
ಸೆಂಥಿಲ್ ಬಾಲಾಜಿ ಅವರ ವಿಚಾರವಾಗಿ ತಮಿಳುನಾಡು ರಾಜ್ಯಪಾಲ ರವಿ ಅಟಾರ್ನಿ ಜನರಲ್‌ನಿಂದ ಕಾನೂನು ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದಾರೆ. ಕಾನೂನು ಅಭಿಪ್ರಾಯ ಬರುವವರೆಗೆ ರಾಜಭವನದ ಹಿಂದಿನ ಆದೇಶವನ್ನು ಅಮಾನತುಗೊಳಿಸಲಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಇದರರ್ಥ ಬಾಲಾಜಿ ಸದ್ಯಕ್ಕೆ ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ) ದಿಂದ ಬಂಧನಕ್ಕೊಳಗಾದ ಸಚಿವ ವಿ ಸೆಂಥಿಲ್ ಬಾಲಾಜಿ ಅವರು ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರು ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ ಎಂದು ರಾಜಭವನವು ಪತ್ರಿಕಾ ಪ್ರಕಟಣೆ ಮೂಲಕ ಹೇಳಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಚಿವರನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ, ನಾವು ಅದನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಉದ್ಯೋಗಕ್ಕಾಗಿ ಲಂಚ ಪಡೆದ ಪ್ರಕರಣ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜೂನ್ 14 ರಂದು ಜಾರಿ ನಿರ್ದೇಶನಾಲಯವು ವಿದ್ಯುತ್, ಅಬಕಾರಿ ಖಾತೆಯನ್ನು ಹೊಂದಿದ್ದ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿತ್ತು. ನಂತರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೂನ್ 15 ರಂದು ಮದ್ರಾಸ್ ಹೈಕೋರ್ಟ್ ಅವರನ್ನು ಅವರ ಆಯ್ಕೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಿತ್ತು.