ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಂಗಲ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ತುರ್ತು ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (NDRF) 2,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಉತ್ತಮ ಪ್ರಯತ್ನಗಳ ಹೊರತಾಗಿಯೂ, ಚಂಡಮಾರುತದಿಂದ ಉಂಟಾಗುವ ಪ್ರಾಕೃತಿಕ ವಿಕೋಪಗಳಿಂದ ರಾಜ್ಯದ ಸಂಪನ್ಮೂಲಗಳು ಹಾನಿಗೀಡಾಗಿವೆ. ನಷ್ಟವನ್ನು ನಿರ್ವಹಿಸಲು ತಮಿಳುನಾಡಿಗೆ ತುರ್ತು ಹಣಕಾಸಿನ ನೆರವು ಅಗತ್ಯವಿದೆ ಎಂದು ಸ್ಟಾಲಿನ್ ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ತಾತ್ಕಾಲಿಕ ಮರುಸ್ಥಾಪನೆ ಪ್ರಯತ್ನಗಳಿಗೆ 2,475 ಕೋಟಿ ರೂಪಾಯಿ ಅಗತ್ಯವಿದೆ ಎಂದ ಸಿಎಂ, ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹಾನಿಯ ಸಮಗ್ರ ಮೌಲ್ಯಮಾಪನವನ್ನು ಕೈಗೊಳ್ಳಲು ಆದಷ್ಟು ಬೇಗ ಕೇಂದ್ರ ತಂಡವನ್ನು ನಿಯೋಜಿಸುವಂತೆ ಅವರು ಪ್ರಧಾನ ಮಂತ್ರಿಗಳನ್ನು ಮನವಿ ಮಾಡಿದರು.
ಫೆಂಗಲ್ ಚಂಡಮಾರುತದಿಂದ ಪೀಡಿತ ಜಿಲ್ಲೆಗಳಲ್ಲಿ ಮೂಲಸೌಕರ್ಯ, ಕೃಷಿ ಮತ್ತು ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಹೆಚ್ಚಿನ ಹಣಕಾಸಿನ ಸಹಾಯಕ್ಕಾಗಿ ಕೋರುತ್ತೇನೆ. ಈ ನಿರ್ಣಾಯಕ ಕ್ಷಣದಲ್ಲಿ ಕೇಂದ್ರವು ತಮಿಳುನಾಡಿಗೆ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆ. ಈ ಬಿಕ್ಕಟ್ಟನ್ನು ನಿವಾರಿಸಲು ಮತ್ತು ತ್ವರಿತವಾಗಿ ಸಹಜತೆಯನ್ನು ಪುನಃಸ್ಥಾಪಿಸಲು ತುರ್ತು ನೆರವಿನ ಅಗತ್ಯವಿದೆ ಎಂದಿದ್ದಾರೆ.