ಹೊಸದಿಗಂತ ವರದಿ ಮಡಿಕೇರಿ:
ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಮಿಳುನಾಡು ಮೂಲದ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವ ಘಟನೆ ಶನಿವಾರ ಪೂರ್ವಾಹ್ನ ಹೇರೂರುವಿನಲ್ಲಿ ನಡೆದಿದೆ.
ತಮಿಳುನಾಡು ರಾಜ್ಯದ ನಿವಾಸಿ, ಪ್ರಸ್ತುತ ಬೆಂಗಳೂರಿನ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸುದರ್ಶನ್ (22) ಮೃತ ವಿದ್ಯಾರ್ಥಿ. ಕಾಲೇಜಿನ ತಂಡವೊಂದು ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದು, ಶನಿವಾರ ಪೂರ್ವಾಹ್ನ ಹೇರೂರಿನಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನ ವೀಕ್ಷಣೆಗೆ ತೆರಳಿತ್ತು.
ಈ ತಂಡದ ಪೈಕಿ ಸುದರ್ಶನ್ ನೀರಿಗೆ ಇಳಿದಿದ್ದು, ನಂತರ ಮೇಲಕ್ಕೆ ಬರಲಾಗದೆ ಉಸಿರು ಚೆಲ್ಲಿದ್ದಾನೆ. ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳೀಯ ಮುಳುಗು ತಜ್ಞರ ಸಹಕಾರೊಂದಿಗೆ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.



