ಹೊಸ ದಿಗಂತ ವರದಿ, ಕಲಬುರಗಿ:
ತಾಂಡಾ ನಿವಾಸಿಗಳಿಗೆ ದೇಶದಲ್ಲಿಯೇ ಐತಿಹಾಸಿಕವಾಗಿ ಗುರುವಾರ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ 5 ಜಿಲ್ಲೆಗಳ 342 ಗ್ರಾಮಗಳ 52,072 ತಾಂಡಾ ನಿವಾಸಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ಹಕ್ಕು ಪತ್ರ ನೀಡಿದ್ದರಿಂದ ವರ್ಲ್ಡ್ ಬುಕ್ ಆಫ್ ರಿಕಾರ್ಡ್ ತಂಡ ರಾಜ್ಯ ಸರ್ಕಾರಕ್ಕೆ ವೇದಿಕೆ ಮೇಲೆ ಪ್ರೋವಿಜನಲ್ ಪ್ರಮಾಣ ಪತ್ರ ನೀಡಿತು.
ವರ್ಲ್ಡ್ ಬುಕ್ ಆಫ್ ರಿಕಾರ್ಡ್ ಕರ್ನಾಟಕ ತಂಡದ ಉಪಾಧ್ಯಕ್ಷೆ ವಸಂತ ಕವಿತಾ (ಕೆ.ಸಿ.ರೆಡ್ಡಿ)
ಅವರು ಕಂದಾಯ ಸಚಿವ ಆರ್. ಅಶೋಕ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.
ಹಕ್ಕು ಪತ್ರ ವಿತರಣೆ ಕುರಿತಂತೆ ಜಿಲ್ಲಾಡಳಿತ ಕೋರಿಕೆ ಮೇರೆಗೆ ಗುರುವಾರ ವರ್ಲ್ಡ್ ಬುಕ್ ಆಫ್ ರಿಕಾರ್ಡ್ ಕರ್ನಾಟಕ ತಂಡದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಬಂದು ಖುದ್ದಾಗಿ ದಾಖಲೀಕರಣ ಮಾಡಿತು.
ಈ ಕುರಿತು ಪ್ರತಿಕ್ರಿಯೆ ನೀಡಿದ ವಸಂತ ಕವಿತಾ(ಕೆ.ಸಿ.ರೆಡ್ಡಿ) ಅವರು, ಕಲಬುರಗಿ ಜಿಲ್ಲಾಡಳಿತ ಕೋರಿಕೆಯಂತೆ ನಮ್ಮ ತಂಡ ಕಳೆದ 3 ತಿಂಗಳಿನಿಂದ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಿಂದ ದಾಖಲೆಗಳನ್ನು ಪಡೆದು ಪರಿಶೀಲಿಸಿ ಇಂದು ದಾಖಲೀಕರಣಕ್ಕೆ ಆಗಮಿಸಿದ್ದೇವೆ. ಇಂದಿನ ಕಾರ್ಯಕ್ರಮದಲ್ಲಿ ಎಷ್ಟು ತಾಂಡಾ ನಿವಾಸಿಗಳಿಗೆ ಎಷ್ಟು ಹಕ್ಕು ಪತ್ರ ನೀಡಲಾಗಿದೆ ಎಂಬುದನ್ನು ನಿಖರ ಸಂಖ್ಯೆ ಪಡೆದ ನಂತರ ಅಂತಿಮವಾಗಿ ರೆಕಾರ್ಡ್ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಪ್ರಮಾಣ ಪತ್ರ ಸ್ವೀಕರಿಸುವ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಮುರುಗೇಶ್ ನಿರಾಣಿ,ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮಡು ಇತರರು ಉಪಸ್ಥಿತರಿದ್ದರು.