ಸಾಧನೆಗೆ ಮುನ್ನುಡಿ ಬರೆದ ಹುಡುಗರು: ತಪಸ್‍ನ 15 ವಿದ್ಯಾರ್ಥಿಗಳಿಗೆ ಐಐಟಿ ಪ್ರವೇಶ ಅರ್ಹತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಪ್ರತಿಭಾನ್ವಿತ ಮತ್ತು ಅರ್ಹ ಬಡ ಗಂಡುಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯೇ ತಪಸ್. ಈ ಯೋಜನೆಯ 2023ರ ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ತಪಸ್‍ 10ನೇ ತರಗತಿ ಬ್ಯಾಚಿನ 33 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ತೆಗೆದುಕೊಂಡಿದ್ದು, ಅವರಲ್ಲಿ 15 ವಿದ್ಯಾ ರ್ಥಿಗಳು ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ(ಭಾರತೀಯ ತಂತ್ರಜ್ಞಾನ ಸಂಸ್ಥೆ) ಪ್ರವೇಶದ ಅರ್ಹತೆಯನ್ನು ಪಡೆದಿದ್ದಾರೆ.

ಜಗತ್ತಿನಲ್ಲೇ ಕಷ್ಟಕರ ಎಂದು ಪರಿಗಣಿಸಲ್ಪಡುವ ಐಐಟಿ – ಜೆಇಇ ಪರೀಕ್ಷೆಯನ್ನು ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ದುರ್ಬಲವರ್ಗದಿಂದ ಬಂದ ತಪಸ್-ನ ವಿದ್ಯಾರ್ಥಿಗಳು ಎದುರಿಸಿರುವುದು ಮೊದಲ ವಿಶೇಷ. ಈ ಬ್ಯಾಚಿನ ಒಟ್ಟು 38 ಮಂದಿಯ ಪೈಕಿ 15 ಮಂದಿ ಐಐಟಿ ಪ್ರವೇಶಿಸುವ ಅರ್ಹತೆ ಪಡೆದಿರುವುದು ಮತ್ತೊಂದು ವಿಶೇಷ. ಮಕ್ಕಳ ಪೋಷಕರು ರೈತ, ಫೋಟೋಗ್ರಾಫರ್, ಡ್ರೈವರ್, ಕೂಲಿ ಕಾರ್ಮಿಕ, ಅಟೆಂಡರ್, ಮೆಕ್ಯಾನಿಕ್, ಬಡಗಿ, ಸೆಕ್ಯುರಿಟಿ ಈ ತರಹದ ವೃತ್ತಿಯನ್ನು ಮಾಡುವವರಾಗಿದ್ದರೂ ಮಕ್ಕಳ ಸಾಧನೆಗೆ ತೊಡಕಾಗದಂತೆ ಯೋಜನೆ ಸಹಕಾರ ನೀಡಿರುವುದು ಮಗದೊಂದು ವಿಶೇಷ.

ಬೆಳಗಾವಿಯ ಪ್ರಜ್ವಲ್ ಲಕ್ಷ್ಮಣ್‍ ಮಗ್ದುಮ್ 1952 ರ್ಯಾಂಗ್ ಪಡೆಯುವುದರೊಂದಿಗೆ ತಪಸ್‍ನ ಈ ಬ್ಯಾಚಿನ ಮೊದಲಿಗನಾಗಿದ್ದಾನೆ. ಬೆಂಗಳೂರು ಗ್ರಾಮಾಂತರದ ಚರಣ್ ಸಿ ಎಂ 11,454ನೇ ರ್ಯಾಂಕ್, ಚಿತ್ರದುರ್ಗದ ದತ್ತ ಎಲ್ 11,803ನೇ ರ್ಯಾಂಕ್, ಉತ್ತರ ಕನ್ನಡದ ಅಮೋಘ್ ಪೈ 13,399ನೇ ರ್ಯಾಂಕ್, ಬೆಂಗಳೂರಿನ ಕುಶಾಲ್ ಎಲ್ 14,942ನೇ ರ್ಯಾಂಕ್, ಉತ್ತರ ಕನ್ನಡದ ಮನೋಹರ ಎಂ ಹೆಗಡೆ 17,452ನೇ ರ್ಯಾಂಕ್, ಬೆಳಗಾವಿಯ ಧನಂಜಯ್ ಕಿರಣ್ ಹೊನ್ನಟ್ಟಿ 19,988ನೇ ರ್ಯಾಂಕ್, ಬೀದರಿನ ವಿನುತ್ ಸಿಂಗಿನ್ 22,739ನೇ ರ್ಯಾಂಕ್ ಪಡೆದಿದ್ದಾರೆ.

ರಾಷ್ಟ್ರೋತ್ಥಾನವು ತಪಸ್‍ ಯೋಜನೆಯನ್ನು 2012ರಲ್ಲಿ ಬೇಸ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಿತು. ಅಲ್ಲಿಂದ ಮೊದಲ್ಗೊಂಡು, 2023ರ ವರೆಗೆ ಒಟ್ಟು 10 ಬ್ಯಾಚುಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ವರ್ಷಕ್ಕೆ 40ರಂತೆ ಆಯ್ಕೆಯಾದ ಒಟ್ಟು 392 ವಿದ್ಯಾರ್ಥಿಗಳಲ್ಲಿ ಇಲ್ಲಿಯವರೆಗೆ 32 ವಿದ್ಯಾರ್ಥಿಗಳು ದೇಶದ 10 ಐಐಟಿಗಳಲ್ಲಿ ಪ್ರವೇಶ ಪಡೆದಿದ್ದರೆ, 81 ವಿದ್ಯಾರ್ಥಿಗಳು ಎನ್‍ಐಟಿಗೆ ಪ್ರವೇಶ ಪಡೆದಿರುತ್ತಾರೆ.

ವಿವಿಧ ಹಂತದ ಆಯ್ಕೆ ಪ್ರಕ್ರಿಯೆಗಳ ಮೂಲಕ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಪದವಿಪೂರ್ವ ಶಿಕ್ಷಣದೊಂದಿಗೆ ಐಐಟಿ, ಜೆಇಇ ತರಬೇತಿಯನ್ನು ನೀಡಲಾಗುತ್ತದೆ. ಉಚಿತ ವಸತಿ, ಊಟ, ಶಿಕ್ಷಣ ಹಾಗೂ ಇನ್ನಿತರೇ ಸವಲತ್ತುಗಳನ್ನೊದಗಿಸಿ, ದೇಶದ ಪ್ರತಿಷ್ಠಿತ ಐಐಟಿ, ಎನ್‍ಐಟಿ ಮತ್ತು ಇತರೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ತಪಸ್ ಸಹಕರಿಸುತ್ತದೆ.

ಈ ವರೆಗೆ ಪ್ರವೇಶಪರೀಕ್ಷೆ ಬರೆದಿರುವ ಒಟ್ಟು ವಿದ್ಯಾರ್ಥಿಗಳು 31,168 ಹಾಗೂ ಪ್ರವೇಶಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸುಮಾರು 4000.
ಅಂತರ್ಜಾಲ ತಾಣ: www.tapassaadhana.org
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 94812 01144/ 98446 02529/ 79759 13828

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!