ಭಾರತದಲ್ಲಿ ಐಫೋನ್‌ ತಯಾರಿಕೆಗೆ ಟಾಟಾ ಗ್ರೂಪ್ ಸಜ್ಜು

ಹೊಸದಿಗಂತ ಡಿಜಿಟಲ್ ಡೆಸ್ಕ್

ಟಾಟಾ ಕಂಪನಿಯು ಮೊಬೈಲ್ ಮೇಕಿಂಗ್ ನತ್ತ ಮುಖಮಾಡಿದ್ದು, ‘ಮೇಡ್ ಇನ್ ಇಂಡಿಯಾ’ ಐಫೋನ್‌ಗಳನ್ನು ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ಗೌರವಕ್ಕೆ ಪಾತ್ರವಾಗಲಿದೆ.

ಭಾರತದಲ್ಲಿ ಐಫೋನ್‌ ತಯಾರಿಕೆಗೆ ಟಾಟಾ ಗ್ರೂಪ್ ಸಜ್ಜಾಗಿದ್ದು, ಮುಂದಿನ ಎರಡೂವರೆ ವರ್ಷಗಳಲ್ಲಿ ಈ ಕಂಪನಿ ತಯಾರಿಸಿದ ಐಫೋನ್​ಗಳು ದೇಶ, ವಿದೇಶಗಳಲ್ಲಿ ಮಾರಾಟವಾಗಲಿವೆ.

ಈ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಧಿಕೃತವಾಗಿ ಘೋಷಿಸಿದ್ದು, ಟಾಟಾ ಗ್ರೂಪ್ ತೈವಾನ್‌ನ ವಿಸ್ಟ್ರಾನ್ ಕಂಪನಿಯ ಕರ್ನಾಟಕದ ಪ್ಲಾಂಟ್ ಅನ್ನು ಐಫೋನ್‌ಗಳ ತಯಾರಿಕೆಗಾಗಿ ಸ್ವಾಧೀನಪಡಿಸಿಕೊಂಡಿದೆ. ಇದರೊಂದಿಗೆ ಟಾಟಾ ಗ್ರೂಪ್ ಐಫೋನ್‌ಗಳನ್ನು ತಯಾರಿಸಿದ ಮೊದಲ ಭಾರತೀಯ ಕಂಪನಿಯಾಗಲಿದೆ.

PLI ಪ್ರೋತ್ಸಾಹಕ ಯೋಜನೆಯೊಂದಿಗೆ ಭಾರತವು ಈಗಾಗಲೇ ಸ್ಮಾರ್ಟ್‌ಫೋನ್ ತಯಾರಿಕೆ ಮತ್ತು ರಫ್ತಿಗೆ ವಿಶ್ವಾಸಾರ್ಹ ಮತ್ತು ಪ್ರಮುಖ ಕೇಂದ್ರವಾಗುತ್ತಿದೆ. ಮುಂದಿನ ಎರಡೂವರೆ ವರ್ಷಗಳಲ್ಲಿ ಟಾಟಾ ಗ್ರೂಪ್ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸುತ್ತದೆ.’ವಿಸ್ಟ್ರಾನ್ ಕಾರ್ಯಾಚರಣೆಗಳನ್ನು ಖರೀದಿಸಿದ್ದಕ್ಕಾಗಿ ಟಾಟಾಗೆ ಅಭಿನಂದನೆಗಳು’ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ, ವಿಸ್ಟ್ರಾನ್ ಕಾರ್ಪ್ ಕರ್ನಾಟಕದಲ್ಲಿ ದೇಶೀಯವಾಗಿ ಐಫೋನ್‌ಗಳನ್ನು ತಯಾರಿಸುತ್ತಿದೆ. ಐಫೋನ್‌ಗಳ ತಯಾರಿಕಾ ಕ್ಷೇತ್ರ ಪ್ರವೇಶಿಸಲು ನಿರ್ಧರಿಸಿರುವ ಟಾಟಾ ಗ್ರೂಪ್, ವಿಸ್ಟ್ರಾನ್ ಕಾರ್ಪ್‌ನೊಂದಿಗೆ ಒಂದು ವರ್ಷ ಚರ್ಚೆ ನಡೆಸಿದೆ. ಇದಕ್ಕೂ ಮೊದಲು ಜಂಟಿ ಉದ್ಯಮ ರಚನೆಯಾಗಲಿದೆ ಎಂಬ ಸುದ್ದಿಯಿದ್ದರೂ ಟಾಟಾ ಕಂಪನಿ ನಂತರ ಖರೀದಿಸಲು ಆದ್ಯತೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ವಿಸ್ಟ್ರೋನ್ ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆಯಲ್ಲಿ ಟಾಟಾ ಕಂಪನಿಯ ಖರೀದಿ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ.

ಕರ್ನಾಟಕದಲ್ಲಿರುವ ವಿಸ್ಟ್ರಾನ್ ಸ್ಥಾವರದಲ್ಲಿ ಶೇ 100ರಷ್ಟು ಷೇರುಗಳನ್ನು ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿಸ್ಟ್ರಾನ್ ಹೇಳಿಕೆಯಲ್ಲಿ ಬಹಿರಂಗಪಡಿಸಿದೆ. 125 ಮಿಲಿಯನ್ ಡಾಲರ್‌ಗೆ ಈ ಒಪ್ಪಂದವನ್ನು ಮುಕ್ತಾಯಗೊಳಿಸಲಾಗಿದೆ ಎಂದೂ ಹೇಳಲಾಗಿದೆ.

ಈ ಕಾರ್ಖಾನೆಯಲ್ಲಿ ಐಫೋನ್ 14 ಮಾದರಿಯ ಜೋಡಣೆ ಮಾಡಲಾಗುತ್ತಿದೆ. ಸುಮಾರು 10 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ನೀಡುವ ಪ್ರೋತ್ಸಾಹದಿಂದ ಐಫೋನ್‌ಗಳ ಉತ್ಪಾದನೆ ಹೆಚ್ಚಿಸುತ್ತಿರುವ ವಿಸ್ಟ್ರಾನ್ ಕಾರ್ಪ್, ಮಾರ್ಚ್ 2024ರೊಳಗೆ 1.8 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ಪೂರೈಸಲು ನಿರ್ಧರಿಸಿದೆ. ಮುಂದಿನ ವರ್ಷದ ವೇಳೆಗೆ ಉದ್ಯೋಗಿಗಳನ್ನು ಮೂರು ಪಟ್ಟು ಹೆಚ್ಚಿಸುವುದಾಗಿ ವಿಸ್ಟ್ರಾನ್ ಕಾರ್ಪೊರೇಷನ್ ಹೇಳಿದೆ. ಸಂಬಂಧಿತ ಮೂಲಗಳ ಪ್ರಕಾರ, ಈ ಖರೀದಿಯೊಂದಿಗೆ ವಿಸ್ಟ್ರಾನ್ ಭಾರತದಿಂದ ನಿರ್ಗಮಿಸಿದರೆ ಟಾಟಾ ಗ್ರೂಪ್ ಮುಂದುವರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!