ಹೊಸದಿಗಂತ ವರದಿ, ಮಂಡ್ಯ :
ಕೇಂದ್ರದ ತೆರಿಗೆ ಹಣ ತಾರತಮ್ಯ ವಿಚಾರವಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಏಟು-ಎದಿರೇಟು ನೀಡಿದ ಘಟನೆ ಸೋಮವಾರ ನಡೆಯಿತು.
ನಗರದ ರೈಲ್ವೆ ನಿಲ್ವಾಣದ ಬಳಿ ನಡೆದ ಮಂಡ್ಯ ರೈಲು ನಿಲ್ದಾಣದ ಶಂಕುಸ್ಥಾಪನಾ ಸಮಾರಂಭದಲ್ಲಿ ತೆರಿಗೆ ಹಣದ ಅನುದಾನದ ವಿಚಾರ ಪ್ರಸ್ತಾಪಗೊಂಡು ಇಬ್ಬರೂ ತಮ್ಮ ಭಾಷಣದ ಮೂಲಕ ಜುಗಲ್‌ಬಂಧಿ ನಡೆಸಿದರು.
ಮೊದಲು ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಅಭಿವೃದ್ಧಿಗೆ ಯಾರೂ ಅವರ ಜೇಬಿನಿಂದ ತೆಗೆದು ಹಣ ಕೊಡುತ್ತಿಲ್ಲ. ಕೇಂದ್ರ-ರಾಜ್ಯಗಳೆರಡೂ ಕೊಡುತ್ತಿರುವುದು ರಾಜ್ಯದ ಜನರ ತೆರಿಗೆ ಹಣ. ಕರ್ನಾಟಕ ವಾರ್ಷಿಕ 4.50 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದೆ. ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಅದರ ಅರ್ಧದಷ್ಟು ಹಣವೂ ಬರುತ್ತಿಲ್ಲ. ಹಾಗಾಗಿ ಕೇಂದ್ರ ರಾಜ್ಯದ ಅಭಿವೃದ್ಧಿಗೆ ಎಷ್ಟು ಹಣ ನೀಡಿದರೂ ಅದು ಕಡಿಮೆಯೇ ಎಂದರು.
ಜನಸಂಖ್ಯೆಯನ್ನು ಆಧರಿಸಿ ಅನುದಾನ ನೀಡುವ ಕೇಂದ್ರ ಹಣಕಾಸು ಆಯೋಗದ ನಿಯಮಾವಳಿಗೆ ತಿದ್ದುಪಡಿ ತರುವ ಅಗತ್ಯವಿದೆ. ಇದು ಬದಲಾವಣೆಯಾಗಬೇಕು. ಕರ್ನಾಟಕದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಜನಸಂಖ್ಯೆ ಹೆಚ್ಚಿರುವ ಉತ್ತರ ಪ್ರದೇಶ ಕಡಿಮೆ ತೆರಿಗೆ ಪಾವತಿಸುತ್ತಿದೆ. ಜನಸಂಖ್ಯೆ ಆಧರಿಸಿ ಅನುದಾನ ನೀಡುವ ಮಾನದಂಡ ಬದಲಾಗಬೇಕಿದೆ ಎಂದು ಹೇಳಿದರು.