ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೊಟೀಸ್: ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದ ಪ್ರಲ್ಹಾದ್‌ ಜೋಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್‌ ನೀಡುತ್ತಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.

ತೆರಿಗೆ ನೊಟೀಸ್ ನೀಡುವಲ್ಲಿ ರಾಜ್ಯ ಸರಕಾರದ ಪಾತ್ರವೇನಿಲ್ಲ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಜೋಶಿ, ರಾಜ್ಯ ಸರ್ಕಾರ ಮಾಡುವುದೆಲ್ಲ ಮಾಡಿಬಿಟ್ಟು ಈಗ ತನಗೇನೂ ಸಂಬಂಧವಿಲ್ಲ ಎನ್ನುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೊಟೀಸ್ ಕೊಟ್ಟಿರುವುದು ರಾಜ್ಯ ಸರ್ಕಾರದ ತೆರಿಗೆ ಇಲಾಖೆ ಅಧಿಕಾರಿಗಳು. ಆದ್ರೆ ರಾಜ್ಯ ಸರ್ಕಾರಕ್ಕೂ, ಜಿಎಸ್‌ಟಿ ನೊಟೀಸ್ ಗೂ ಸಂಬಂಧವಿಲ್ಲ ಎನ್ನುತ್ತ ಜನರ ಕಣ್ಣಿಗೆ ಮಣ್ಣೆರೆಚೋ ಕೆಲಸ ಮಾಡುತ್ತಿದ್ದಾರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ.

ಒಂದು ವೇಳೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದರೆ ಬಹುತೇಕ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತಿತ್ತು. ಆದರೆ, ಬೇರೆ ಯಾವುದೇ ರಾಜ್ಯಗಳಲ್ಲೂ ತೆರಿಗೆ ಇಲಾಖೆ ಅಧಿಕಾರಿಗಳಿಂದ ಸಣ್ಣಪುಟ್ಟ ವ್ಯಾಪಾರಾಸ್ಥರಿಗೆ ಜಿಎಸ್‌ಟಿ ನೊಟೀಸ್ ನೀಡಲಾಗಿಲ್ಲ. ಕರ್ನಾಟಕದಲ್ಲಿ ಮಾತ್ರ ಇದಾಗಿದೆ ಎಂದಿದ್ದಾರೆ.

GSTಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ʼCGSTʼ ಮತ್ತು ರಾಜ್ಯ ಸರ್ಕಾರಗಳ‌ ಅಡಿಯಲ್ಲಿ ʼSGSTʼ ಎಂದು ಎರಡು ಭಾಗವಿದೆ. ಆದರಂತೆ ಕರ್ನಾಟಕದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೊಟೀಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೊಟೀಸ್ ನೀಡುವ ಮೂಲಕ ಡಿಜಿಟಲ್‌, ಯುಪಿಐ ವಹಿವಾಟು ಹದಗೆಡಿಸುವ ದುಸ್ಸಾಹಸಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಕೈ ಹಾಕಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಯುಪಿಐ ವಹಿವಾಟು ವಿಶ್ವಕ್ಕೇ ಮಾದರಿಯಾಗಿದೆ. ಆದರೆ, ರಾಜ್ಯದಲ್ಲಿ ಈ ಪಾರದರ್ಶಕ ವ್ಯವಸ್ಥೆಗೆ ಸಂಚಕಾರ ತರಲೆತ್ನಿಸುತ್ತಿದ್ದು, ರಾಜ್ಯ ಸರ್ಕಾರದ ಈ ಕ್ಷುಲ್ಲಕ ರಾಜಕಾರಣ ನಿಜಕ್ಕೂ ದುರಂತವೇ ಸರಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!