ಮನೆಯ ಟಾಯ್ಲೆಟ್ ಮೇಲೂ ಟ್ಯಾಕ್ಸ್: ಇದು ಈ ರಾಜ್ಯದ ಗ್ಯಾರಂಟಿ ಹೊಡೆತ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮನೆಯಿಂದ ಹೊರ ಹಾಕುವ ಕಸದ ಮೇಲೆ ತೆರಿಗೆ ಹಾಕೋದನ್ನ ಕೇಳಿದ್ದೇವೆ. ಆದರೆ ಮನೆಯಲ್ಲಿರುವ ಟಾಯ್ಲೆಟ್‌ಗಳ ಮೇಲೆ ತೆರಿಗೆ ವಿಧಿಸೋ ಬಗ್ಗೆ  ಕೇಳಿದ್ದೀರಾ? ಇಲ್ಲಿದೆ ನೋಡಿ ಹಿಮಾಚಲ ಪ್ರದೇಶ ಸರ್ಕಾರ ಜನರ ಮನೆಯಲ್ಲಿರುವ ಟಾಯ್ಲೆಟ್‌ಗಳ ಮೇಲೆ ತೆರಿಗೆ ವಿಧಿಸಲು ಅಧಿಸೂಚನೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಹೌದು,   ಉಚಿತ ಗ್ಯಾರಂಟಿಗಳಿಂದ ಆರ್ಥಿಕ ಬಿಕ್ಕಟು ಎದುರಿಸುತ್ತಿರುವ ಹಿಮಾಚಲ ಪ್ರದೇಶ ಸರ್ಕಾರ ಇಂತಹದೊಂದು ಕಾನೂನು ಜಾರಿಗೆ ಮುಂದಾಗಿದ್ದು,  ಟಾಯ್ಲೆಟ್‌ಗಳ ಮೇಲೆ ಸರ್ಕಾರ ತೆರಿಗೆ ವಿಧಿಸಲು ಸಿಎಂ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಸೂಚನೆ ನೀಡಿದೆ.

ಹಿಮಾಚಲ ಪ್ರದೇಶ ನಗರ ಪ್ರದೇಶದಲ್ಲಿರುವ ಪ್ರತಿ ಟಾಯ್ಲೆಟ್ ಮೇಲೆ 25 ರೂಪಾಯಿ ತೆರಿಗೆ ವಿಧಿಸಲು ಆದೇಶ ನೀಡಲಾಗಿದೆ. ಇನ್ಮುಂದೆ ಇಲ್ಲಿನ ಪ್ರತಿ ತಿಂಗಳು ಪ್ರತಿ ಟಾಯ್ಲೆಟ್‌ಗೆ 25 ರೂಪಾಯಿ ತೆರಿಗೆ ಕಟ್ಟಬೇಕು. ಒಳಚರಂಡಿ ಬಿಲ್ ಜೊತೆಗೆ ಟಾಯ್ಲೆಟ್ ಬಿಲ್ ಅನ್ನು ಜಲಶಕ್ತಿ ಇಲಾಖೆಗೆ ನೀಡಬೇಕು ಎನ್ನಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ನೀರಿನ ಬಿಲ್‌ ಜೊತೆಗೆ ಶೇ.30 ರಷ್ಟು ಒಳಚರಂಡಿ ಬಿಲ್ ಕೂಡ ನೀಡಬೇಕು. ನಗರ ಪ್ರದೇಶದ ಎಲ್ಲಾ ಉಪವಿಭಾಗಗಳಿಗೂ ಸರ್ಕಾರ ಈ ಆದೇಶ ಹೊರಡಿಸಿದೆ. ಈ ಮೊದಲು ಹಿಮಾಚಲ ಪ್ರದೇಶದಲ್ಲಿ ನೀರಿನ ಬಿಲ್ ಕೂಡ ಇರಲಿಲ್ಲ. ಈಗ ಪ್ರತಿಯೊಂದು ನೀರಿನ ಸಂಪರ್ಕಕ್ಕೂ ಪ್ರತಿ ತಿಂಗಳು 100 ರೂಪಾಯಿ ಬಿಲ್ ಪಾವತಿ ಮಾಡಬೇಕಿದೆ. ಇದೇ ಅಕ್ಟೋಬರ್ ತಿಂಗಳಿನಿಂದ ನೀರಿನ ಬಿಲ್ ನೀಡಲು ರಾಜ್ಯ ಸರ್ಕಾರ ಆದೇಶ ನೀಡಿದೆ.

 ನಿರ್ಮಲಾ ಸೀತಾರಾಮನ್ ಕಿಡಿ
ಹಿಮಾಚಲ ಪ್ರದೇಶ ಸರ್ಕಾರ ಟಾಯ್ಲೆಟ್ ಸೀಟ್‌ ಮೇಲೂ ಟ್ಯಾಕ್ಸ್‌ ಹಾಕಿರುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾ Xನಲ್ಲಿ ಪೋಸ್ಟ್ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು ಇದನ್ನು ನಂಬಲು ಸಾಧ್ಯವಿಲ್ಲ. ಇದು ನಿಜಾನಾ? ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಆಂದೋಲನ ನಡೆಸುತ್ತಿದ್ದಾರೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಟಾಯ್ಲೆಟ್ ಮೇಲೂ ತೆರಿಗೆ ಹಾಕುತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಒಳ್ಳೆ ಶೌಚಾಲಯದ ವ್ಯವಸ್ಥೆ ನೀಡಲಿಲ್ಲ. ಇದು ದೇಶಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!