ಟಿಬಿ ಡ್ಯಾಂನ ಎಲ್ಲಾ ಕ್ರಸ್ಟ್ ಗೇಟ್‌ಗಳ ಬದಲಾವಣೆಗೆ ಅಸ್ತು: 15 ತಿಂಗಳ ಗಡುವು

ಹೊಸದಿಗಂತ ವರದಿ ವಿಜಯನಗರ:

ತುಂಗಭದ್ರಾ ಜಲಾಶಯದ ಎಲ್ಲ 32ನೇ ಕ್ರಸ್ಟ್ ಗೇಟ್‌ಗಳನ್ನು ಹೊಸದಾಗಿ ಅಳವಡಿಸಲು ಕರೆದಿದ್ದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. 52 ಕೋಟಿ ರೂ. ಅಂದಾಜು ಮೊತ್ತದಲ್ಲಿ ನೂತನ ಗೇಟ್‌ಗಳ ನಿರ್ಮಾಣಕ್ಕೆ ಒಪ್ಪಿರುವ ಗುಜರಾತ್ ಮೂಲದ ಹಾರ್ಡ್ವೇರ್ ಟೂಲ್ಸ್ ಅಂಡ್ ಮೆಷಿನರೀಸ್ ಪ್ರೈ.ಲಿ. ಮುಂದಿನ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಿದೆ.

ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಮೂರು ರಾಜ್ಯ ಸರ್ಕಾರಗಳ ಒಪ್ಪಿಗೆಯೊಂದಿಗೆ ಜಲಾಶಯದ ಗೇಟ್‌ಗಳ ಬದಲಾವಣೆಗಾಗಿ ಟಿ.ಬಿ. ಬೋರ್ಡ್ ಅಧಿಕಾರಿಗಳು ಕಳೆದ ತಿಂಗಳು ನಡೆಸಿದ್ದ ಟೆಂಡರ್ ಕರೆದಿದ್ದರು. ಈ ವೇಳೆ ಗುಜರಾತ್ ಮೂಲದ ಹಾರ್ಡ್ವೇರ್ ಟೂಲ್ಸ್ ಅಂಡ್ ಮೆಷಿನರೀಸ್ ಪ್ರೈ.ಲಿ ಅನಾರ್ ಇಂಡಸ್ಟ್ರೀಸ್‌ ಪ್ರೈವೇಟ್‌ ಲಿಮಿಟೆಡ್‌  ಆಂಧ್ರ ಪ್ರದೇಶದ ಸ್ವಪ್ನಾ ಹಾಗೂ ತೆಲಂಗಾಣದ ಬೇಕಂ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗಳು ಅರ್ಜಿ ಸಲ್ಲಿಸಿದ್ದವು.

ಪ್ರಸ್ತಾವಿತ ಕಂಪನಿಗಳ ವರ್ಕ್ ಡನ್ ಹಾಗೂ ನಮೋದಿಸಿರುವ ದರವನ್ನು ಆಧರಿಸಿ ಟಿ.ಬಿ.ಬೋಡ್ ತಾಂತ್ರಿಕ ಅಧಿಕಾರಿಗಳು ಟೆಂಡರ್ ಅಂತಿಮಗೊಳಿಸಿದ್ದಾರೆ. 52 ಕೋಟಿ ರೂ. ಮೊತ್ತದಲ್ಲಿ ಎಲ್ಲ 32 ಕ್ರಸ್ಟ್ ಗೇಟ್‌ಗಳನ್ನು ನಿರ್ಮಿಸಲು ಹಾರ್ಡ್ವೇರ್ ಟೂಲ್ಸ್ ಅಂಡ್ ಮೆಷಿನರೀಸ್ ಪ್ರೈವೇಟ್‌ ಲಿಮಿಟೆಡ್‌  ಟೆಂಡರ್ ಅನುಮತಿಸಿದ್ದಾರೆ. ಅಲ್ಲದೇ, ಹಾರ್ಡ್ವೇರ್ ಟೂಲ್ಸ್ ಅಂಡ್ ಮೆಷಿನರೀಸ್ ಪ್ರೈವೇಟ್‌ ಲಿಮಿಟೆಡ್‌ ಅವರೇ 19ನೇ ಗೇಟ್ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಫ್ಯಾಬ್ರಿಕೇಷನ್ ಕೆಲಸ ನಡೆಯುತ್ತಿದೆ ಎಂದು ಟಿ.ಬಿ.ಬೋರ್ಡ್ ಕಾರ್ಯದರ್ಶಿ ಒ.ಆರ್.ಕೆ ರೆಡ್ಡಿ ಮಾಹಿತಿ ನೀಡಿದರು.

ಬೇಸಿಗೆಯಲ್ಲೇ ಕಾಮಗಾರಿ ಪೂರ್ಣ:
ಕೊಚ್ಚಿಹೋಗಿರುವ 19ನೇ ಕ್ರಸ್ಟ್ ಗೇಟ್ ಜಾಗದಲ್ಲಿ ಹೊಸ ಗೇಟ್ ಅಳವಡಿಕೆ ಕಾರ್ಯ ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಈ ವೇಳೆಗೆ ಮುಂಗಾರು ಚುರುಕುಗೊಂಡು ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಲಿದ್ದು, ಇನ್ನುಳಿದ ಗೇಟ್‌ಗಳ ಅಳವಡಿಕೆ ಕಷ್ಟಕರ. ಈ ವೇಳೆ ಇನ್ನುಳಿದ ಗೇಟ್‌ಗಳನ್ನು ತಯಾರಿಸಿ ಅಳವಡಿಕೆಗೆ ಸಿದ್ಧವಿರಿಸಲಾಗುತ್ತದೆ. ಮಳೆ ಪ್ರಮಾಣ ಮತ್ತು ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ನೂತನ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಈ ಬಾರಿ ಉತ್ತಮ ಮಳೆಯಾದರೂ, ಫೆಬ್ರವರಿ ಬಳಿಕ ಡ್ಯಾಂನಲ್ಲಿ ನೀರು ಕಡಿಮೆಯಾಗಲಿದ್ದು, ಬೇಸಿಗೆ ಅಂತ್ಯದೊಳಗೆ ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿಪೂರ್ಣಗೊಳ್ಳಲಿದೆ ಎಂಬುದು ಟಿ.ಬಿ. ಬೋರ್ಡ್ ತಾಂತ್ರಿಕ ಅಧಿಕಾರಿಗಳ ಅಭಿಪ್ರಾಯ.

ಹೊಸಪೇಟೆಯಲ್ಲಿರುವ ತುಂಗಭದ್ರಾ ಡ್ಯಾಂ 19ನೇ ಗೇಟ್ ಕಳೆದ ಆಗಸ್ಟ್ 10 ರಂದು ತಡರಾತ್ರಿ ಕೊಚ್ಚಿ ಹೋಗಿತ್ತು. ತುಂಬಿ ತುಳುಕುತ್ತಿದ್ದ ಜಲಾಶಯದ ನೀರು ತಡೆಯುವ ಉದ್ದೇಶದೊಂದಿಗೆ ತಾತ್ಕಾಲಿಕವಾಗಿ ಸ್ಟಾಪ್ಲರ್ ಗೇಟ್ ಅಳವಡಿಸಲಾಗಿದೆ. ಇದರಿಂದಾಗಿ ಎಲ್ಲ ಗೇಟ್‌ಗಳ ಸಾಮರ್ಥ್ಯವನ್ನು ಪರಿಶೀಲಿಸಿದ್ದ ದೆಹಲಿಯ ಡ್ಯಾಂ ಸೇಫ್ಟಿ ತಜ್ಞರ ತಂಡದ ಸಲಹೆ ಮೇರೆಗೆ ಎಲ್ಲ 32 ಗೇಟ್‌ಗಳ ಬದಲಾವಣೆಗೆ ನಿರ್ಧರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!