ಹೊಸದಿಗಂತ ಡಿಜಿಟಲ್ ಡೆಸ್ಕ್:
16 ವರ್ಷದ ವಿದ್ಯಾರ್ಥಿ ಮೇಲೆ ಹಲವು ತಿಂಗಳುಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 40 ವರ್ಷದ ಶಿಕ್ಷಕಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಶಿಕ್ಷಕಿಯನ್ನು ಬಂಧಿಸಲಾಗಿದೆ.
ಆರೋಪಿ ಶಿಕ್ಷಕಿಗೆ ವಿವಾಹಿತೆಯಾಗಿದ್ದು, ಆಕೆಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿಯಲ್ಲಿ ಆರೋಪ ಹೊರಿಸಲಾಗಿದೆ. ಪ್ರಕರಣದ ಬಗ್ಗೆ ಶಾಲೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಶಿಕ್ಷಕಿ ಹನ್ನೊಂದನೇ ತರಗತಿಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಸಂತ್ರಸ್ತ ವಿದ್ಯಾರ್ಥಿ ಕೂಡ 11ನೇ ತರಗತಿ ಓದುತ್ತಿದ್ದ. 2023ರ ಡಿಸೆಂಬರ್‌ನಲ್ಲಿ ಶಾಲೆಯ ವಾರ್ಷಿಕೋತ್ಸವಕ್ಕಾಗಿ ನೃತ್ಯ ಪ್ರದರ್ಶಿಸಲು ಗುಂಪನ್ನು ರಚಿಸಲು ಆಯೋಜಿಸಲಾದ ಸಭೆಗಳ ಸಮಯದಲ್ಲಿ ಆರೋಪಿ ವಿದ್ಯಾರ್ಥಿ ಬಗ್ಗೆ ಅನುಚಿತ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.2024ರ ಜನವರಿಯಲ್ಲಿ ಆಕೆ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿ ಆಕೆಯಿಂದ ದೂರ ಉಳಿಯಲು ಪ್ರಾರಂಭಿಸಿದಾಗ, ಶಿಕ್ಷಕಿ ಶಾಲೆಯಿಂದ ಹೊರಗಿನ ತನ್ನ ಸ್ನೇಹಿತೆಯ ಸಹಾಯ ಕೋರಿದ್ದಾರೆ. ಆಕೆ ಅಪ್ರಾಪ್ತನನ್ನು ಸಂಪರ್ಕಿಸಿ ಅಂತಹ ಸಂಬಂಧಗಳು ಸಾಮಾನ್ಯ ಎಂದು ಹೇಳುವ ಮೂಲಕ ಅವನನ್ನು ಮನವೊಲಿಸಲು ಪ್ರಯತ್ನಿಸಿದ್ದಾಳೆ. ಆತ ಮತ್ತು ಶಿಕ್ಷಕಿ ಮೇಡ್ ಫಾರ್ ಈಚ್ ಅದರ್ ಎಂದು ವಿದ್ಯಾರ್ಥಿಗೆ ಹೇಳಿದ್ದಾಳೆ. ವಯಸ್ಸಾದ ಮಹಿಳೆಯರು ಮತ್ತು ಹದಿಹರೆಯದ ಹುಡುಗರ ನಡುವಿನ ಸಂಬಂಧಗಳು ಸಾಕಷ್ಟು ಸಾಮಾನ್ಯವಾಗಿದೆ ಎಂದು ಸ್ನೇಹಿತೆ ಆತನಿಗೆ ಹೇಳಿದ್ದಾರೆ ಎನ್ನಲಾಗಿದೆ. ಅರೆಸ್ಟ್ ಆದ ಶಿಕ್ಷಕಿಯ ಸ್ನೇಹಿತೆಯ ಮೇಲೆಯೂ ದೂರು ದಾಖಲಿಸಲಾಗಿದೆ.