ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೀಸ್ ಕಟ್ಟಿದ ಮಕ್ಕಳನ್ನು ಬೆಂಚಿನ ಮೇಲೆ ಕುಳಿತು ಪರೀಕ್ಷೆ ಬರೆಸಿ, ಫೀಸ್ ಕಟ್ಟದ ವಿದ್ಯಾರ್ಥಿಯೊಬ್ಬನನ್ನು ನೆಲದಲ್ಲಿ ಕೂರಿಸಿ ಪರೀಕ್ಷೆ ಬರೆಸಿದ ಅಮಾನವೀಯ ಕೃತ್ಯ ನಡೆದಿದೆ.
ಮಹಾರಾಷ್ಟ್ರದ ಭಿವಾಂಡಿಯಲ್ಲಿ ಇರುವ ಸಲಾಹುದ್ದೀನ್ ಅಯ್ಯುಬಿ ಮೆಮೋರಿಯಲ್ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ. ತಂದೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಈ ಶಾಲೆಯಲ್ಲಿ ಓದುತ್ತಿದ್ದ ಫಯಾಜ್ ಖಾನ್ ಎಂಬುವವರ ಮಗ ಫಹಾದ್ ಫಯಾಜ್ ಖಾನ್ಅಳುತ್ತಲೇ ಬಂದು ಅಪ್ಪ ಶಾಲಾ ಫೀಸನ್ನು ನೀನು ಯಾವಾಗ ಕಟ್ತೀಯಾ ಎಂದು ಕೇಳಿದ್ದಾನೆ.
ಶಾಲೆಯಲ್ಲಿ ಫೀಸ್ ಕಟ್ಟದಿರುವ ಕಾರಣಕ್ಕೆ ಶಿಕ್ಷಕರು ಆತನನ್ನು ಇಡೀ ದಿನ ನೆಲದಲ್ಲಿ ಕೂರಿಸಿ ಅವಮಾನಿಸಿದ್ದರಿಂದ ಬಾಲಕ ಕಂಗಾಲಾಗಿದ್ದ, ಶಾಲಾ ಶುಲ್ಕವನ್ನು ಕಟ್ಟದ ಕಾರಣ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ಆತ ನೆಲದಲ್ಲೇ ಕುಳಿತು ಬರೆಯುವಂತೆ ಮಾಡಲಾಗಿತ್ತು.
ಪರೀಕ್ಷೆಯ ವೇಳೆ ಶಿಕ್ಷಕರು ಇತರ ಮಕ್ಕಳಿಂದ ಆತನನ್ನು ಪ್ರತ್ಯೇಕಗೊಳಿಸಿದ್ದು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವುದಕ್ಕೆ ಸೂಚಿಸಿದ್ದಾರೆ. ವಿಚಾರ ತಿಳಿದ ಬಾಲಕನ ತಂದೆ ಮಗ ಫಹಾದ್‌ನನ್ನು ಮಾರನೇ ದಿನ ಶಾಲೆಗೆ ಹೋಗುವಂತೆ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಆಕ್ಟೋಬರ್ 4 ರಂದು ಫಯಾಜ್ ಶಾಲೆಗೆ ಭೇಟಿ ನೀಡಿದ್ದು, ಫಹಾದ್ ಬಗ್ಗೆ ವಿಚಾರಿಸಿದ್ದಾರೆ.
ಫಹಾದ್ 3ನೇ ಫ್ಲೋರ್‌ನಲ್ಲಿ ಕುಳಿತಿದ್ದಾನೆ ಎಂದು ನನಗೆ ಹೇಳಿದರು ಆದರೆ ನನ್ನನ್ನು ಅಲ್ಲಿಗೆ ಹೋಗುವುದಕ್ಕೆ ಬಿಡಲಿಲ್ಲ, ಆದರೂ ನಾನು ಮೇಲೆ ಹೋಗುವಲ್ಲಿ ಯಶಸ್ವಿಯಾದೆ. ಈ ವೇಳೆ ನನ್ನ ಮಗ ನೆಲದ ಮೇಲೆ ನ್ಯೂಸ್ ಪೇಪರ್ ಹಾಸಿ ಆದರ ಮೇಲೆ ಕುಳಿತಿದ್ದ, ಈ ಬಗ್ಗೆ ನಾನು ಪರೀಕ್ಷಾ ಪರಿವೀಕ್ಷಕರನ್ನು ಕೇಳಿದಾಗ ಅವರು ಪ್ರಾಂಶುಪಾಲರ ಬಳಿ ಮಾತನಾಡಲು ಹೇಳಿದರು. ನಂತರ ನಾನು ನನ್ನ ಮಗನನ್ನು ಅಲ್ಲಿಂದ ಕರೆತಂದೆ ಎಂದು ಫಯಾಜ್ ಹೇಳಿದ್ದಾರೆ.
ನಂತರ ಫಯಾಜ್ ತಮ್ಮ ಮಗನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ನಂತರ ಪೊಲೀಸರು ಶಾಲೆಯ ಶಿಕ್ಷಕರು ಹಾಗೂ ಪ್ರಾಂಶುಪಾಲರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇತ್ತ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಿದ್ದರಿಂದ ಆತನನ್ನು ಶಾಲೆಗೆ ಕಳುಹಿಸಿದ್ದಾರೆ. ಫಹಾದ್ ಶಾಲಾ ಶುಲ್ಕ 2,500 ರೂಪಾಯಿ ಆಗಿತ್ತು . ಅದರಲ್ಲಿ 1,200 ರೂಪಾಯಿಯನ್ನು ಪಾವತಿ ಮಾಡಿದ್ದೆ. ಆದರೆ ಉಳಿದ 1,300 ರೂಪಾಯಿಯ ಕಾರಣಕ್ಕೆ ಶಾಲೆ ಈಗಾಗಲೇ ಆತನ 9ನೇ ಕ್ಲಾಸ್ ಫಲಿತಾಂಶವನ್ನು ತಡೆ ಹಿಡಿದಿತ್ತು ಎನ್ನಲಾಗಿದೆ.