March 15, 2026
Sunday, March 15, 2026
spot_img

ವಿದ್ಯಾರ್ಥಿನಿಗೆ ಹಾವು ಕಡಿತ: ಬಾಯಿಂದ ವಿಷ ತೆಗೆದು ಬಾಲಕಿಯನ್ನು ರಕ್ಷಿಸಿದ ಶಿಕ್ಷಕ

ಹೊಸ ದಿಗಂತ ವರದಿ, ಚಿತ್ರದುರ್ಗ

‘ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ’ ಅಕ್ಷರ ಕಲಿಸಿ ಬದುಕಿನ ದಾರಿ ತೋರುವ ಗುರುವನ್ನು ಈ ಸಾಲುಗಳಲ್ಲಿ ತ್ರಿಮೂರ್ತಿಗಳಿಗೆ ಹೋಲಿಸಲಾಗಿದೆ. ಇಂತಹ ಪವಿತ್ರ ಸ್ಥಾನದಲ್ಲಿರುವ ಗುರುಗಳು ತಮ್ಮ ಶಿಷ್ಯಗಣದ ಶ್ರೇಯಸ್ಸಿಗೆ ಎಷ್ಟರಮಟ್ಟಿಗೆ ಶ್ರಮಿಸುತ್ತಾರೆ ಎಂಬುದನ್ನು ನೋಡಿದರೆ, ಇತ್ತೀಚಿನ ದಿನಗಳಲ್ಲಿ ಅದು ವಿರಳ ಎನ್ನಬಹುದು. ಆದರೆ ಇಲ್ಲೊಬ್ಬ ಶಿಕ್ಷಕ ಕೇವಲ ಅಕ್ಷರ ಕಲಿಸಿದ್ದು ಮಾತ್ರವಲ್ಲ. ತನ್ನ ಶಾಲೆಯ ವಿದ್ಯಾರ್ಥಿನಿಯ ಜೀವ ಉಳಿಸಲು
ತನ್ನ ಜೀವವನ್ನೆ ಪಣಕ್ಕಿಟ್ಟಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಹುಣುಸೇಕಟ್ಟೆ ಗ್ರಾಮದಲ್ಲಿ ಇಂತಹ ಅಪರೂಪದ ಘಟನೆ ನಡೆದಿದೆ. ಶನಿವಾರ ಮಾರ್ನಿಂಗ್ ಕ್ಲಾಸ್ ಮುಗಿಯುತ್ತಿದ್ದಂತೆ ಮಕ್ಕಳೆಲ್ಲರೂ ಮನೆಗೆ ಹೊರಡುವ ಧಾವಂತದಲ್ಲಿದ್ದರು. ಅಷ್ಟರಲ್ಲೇ ಒಂದನೇ ತರಗತಿ ಸೃಷ್ಟಿ ಎಂಬ ಮಗುವಿಗೆ ಹಾವು ಕಚ್ಚಿದೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಭಯದಿಂದ ಚೀರಾಡತೊಡಗಿದ್ದಾಳೆ. ಜೊತೆಗಿದ್ದ ಮಕ್ಕಳು ಸಹ ಗಾಬರಿಯಿಂದ ಕೂಗಾಡಿದ್ದಾರೆ.

ಇದನ್ನು ಗಮನಿಸಿದ ಮುಖ್ಯ ಶಿಕ್ಷಕ ಟಿ.ಎಸ್. ರವಿಶಂಕರ್ ಕೂಡಲೇ ಮಕ್ಕಳಿದ್ದ ಗುಂಪಿನತ್ತ ಓಡೋಡಿ ಬಂದರು. ಸಂತ್ರಸ್ಥ ಮಗುವನ್ನು ಸಂತೈಸಿ, ಧೈರ್ಯ ಹೇಳಿ ಹಿಂದೆ ಮುಂದೆ ನೋಡದೆ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ಶಿಕ್ಷಕ ತನ್ನ ಬಾಯಿನಿಂದ ವಿಷವನ್ನು ತೆಗೆಯಲು ಮುಂದಾದರು. ವಿಷವನ್ನು ತೆಗೆದು ಕೂಡಲೇ ಅವರದ್ದೇ ದ್ವಿಚಕ್ರ ವಾಹನದಲ್ಲಿ ಮಗುವನ್ನು ಮತ್ತು ಮಗುವಿನ ತಂದೆಯನ್ನು ಕೂರಿಸಿಕೊಂಡು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಬಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ತಾವೂ ದಾಖಲಾಗಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ವೈದ್ಯರ ತಂಡ ಶಿಕ್ಷಕ ಮತ್ತು ಮಗುವಿಗೆ ಚಿಕಿತ್ಸೆ ನೀಡಿದರು. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗುದೆ. ಪ್ರಸ್ತುತ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಪ್ರಾಣಾಯಾಮವಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಘಟನೆಯಿಂದ ಆತಂಕಗೊಂಡ ಇತರೆ ಶಿಕ್ಷಕರು ಮತ್ತು ಮಗುವಿನ ಕುಟುಂಬದವರೆಲ್ಲಾ ಆಸ್ಪತ್ರೆಗೆ ದೌಡಾಯಿಸಿದರು. ಇಬ್ಬರ ಆರೋಗ್ಯ ವಿಚಾರಿಸಿದರು. ಸದ್ಯ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು ಕುಟುಂಬದ ಸದಸ್ಯರು ಹಾಗೂ ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !