ಹೊಸದಿಗಂತ , ಚಿತ್ರದುರ್ಗ:
ಶಿಕ್ಷಕರು ಕ್ರಿಯಾಶೀಲತೆಯಿಂದ ಬೋಧನೆ ಮಾಡಿದಾಗ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ 5, 8 ಮತ್ತು 9ನೇ ತರಗತಿ ಮೌಲ್ಯಾಂಕನ, ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕುರಿತು ಶೈಕ್ಷಣಿಕ ಅನುಷ್ಟಾನಾಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಒಂದು ಪ್ರಜ್ವಲಿಸುವ ದೀಪ ಮತ್ತೊಂದು ದೀಪವನ್ನು ಬೆಳಗಿಸುವಂತೆ ಶಿಕ್ಷಕರು ದೀಪದಂತೆ ಪ್ರಜ್ವಲಿಸಿ ಕ್ರಿಯಾಶೀಲತೆಯಿಂದ ಬೋಧಿಸಿದಾಗ ವಿದ್ಯಾರ್ಥಿಗಳೆಂಬ ಹಣತೆ ಬೆಳಗಿಸಲು ಸಾಧ್ಯವಾಗುತ್ತದೆ.
ಮಕ್ಕಳಲ್ಲಿ ಸ್ಪಷ್ಟಓದು, ಶುದ್ಧ ಬರಹ, ಸಂಖ್ಯಾಜ್ಞಾನ ಸಾಮರ್ಥ್ಯ ಬೆಳೆಸುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ ಮಾತನಾಡಿ, ಶಾಲೆಗಳಲ್ಲಿ ವಾರ್ಷಿಕಕ್ಯಾಲೆಂಡರ್ ನಲ್ಲಿ ಸಿದ್ಧಪಡಿಸಿಕೊಂಡ ಕ್ರಿಯಾಯೋಜನೆಯಂತೆಶಿಕ್ಷಕರು ಕಾರ್ಯ ನಿರ್ವಹಿಸಬೇಕು.ಕಲಿಕಾ ಸಾಮರ್ಥ್ಯದಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ವಿವಿಧ ಬೋಧನಾ ವಿಧಾನ, ಚಟುವಟಿಕೆ ಬಳಸಿಕೊಂಡು ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ದೈಹಿಕ ಶಿಕ್ಷೆ ನಿಷೇಧ, ಪೋಕ್ಸೋ ಕಾಯ್ದೆ ಕುರಿತು ಎಸ್.ಸಿ.ಪ್ರಸಾದ್, ಪೂರ್ಣಿಮಾ ಮಾಹಿತಿ ನೀಡಿದರು. 6 ತಾಲೂಕಿನಲ್ಲಿನ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಧನೆ ಕುರಿತು ಬಿ.ಆರ್.ಸಿ.ಯವರು ಪಿ.ಪಿ.ಟಿ. ಪ್ರಸ್ತುತಪಡಿಸಿದರು.
ಇದೇ ಸಂದರ್ಭದಲ್ಲಿ ಎಫ್.ಎಲ್.ಎನ್. (ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ನಲ್ಲಿ ಶೇ.100 ರಷ್ಟು ಸಾಧನೆ ಮಾಡಿರುವ ಹಿರಿಯೂರು ತಾಲೂಕಿನ ಕೆರೆಕೋಡಿಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗೇಂದ್ರಪ್ಪ ಅವರನ್ನು ಡಯಟ್ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯ ಉಪನ್ಯಾಸಕರಾದ ಎಸ್.ಜ್ಞಾನೇಶ್ವರ, ಹೆಚ್.ಗಿರಿಜಾ, ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಸೈಯದ್ ಮೋಸಿನ್, ಶ್ರೀನಿವಾಸ್, ನಿರ್ಮಲಾ, ಉಪನ್ಯಾಸಕರಾದ ಯು.ಸಿದ್ದೇಶಿ, ಆರ್.ನಾಗರಾಜು, ಎಸ್.ಬಸವರಾಜು, ಎನ್.ರಾಘವೇಂದ್ರ, ವಿ.ಕನಕಮ್ಮ, ನಿತ್ಯಾನಂದ, ಎನ್.ಮಂಜುನಾಥ್, ಬಿ.ಆರ್.ಸಿ.ಗಳಾದ ಸುರೇಂದ್ರನಾಥ್, ತಿಪ್ಪೇರುದ್ರಪ್ಪ, ತಿಪ್ಪೇಸ್ವಾಮಿ, ಶ್ರೀನಿವಾಸ್, ತಿಪ್ಪೇಸ್ವಾಮಿ, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು ಮತ್ತು ಬಿ.ಆರ್.ಪಿ.ಗಳು ಹಾಜರಿದ್ದರು.