T20 World Cup: ಇಂಗ್ಲೆಂಡ್‌ ಮಣಿಸಿ ಫೈನಲ್ಸ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಟೀಂ ಇಂಡಿಯಾ, 10 ವರ್ಷದ ನಂತರ ಫಿನಾಲೆ ಕಡೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆ ತಡರಾತ್ರಿ ಎರಡು ಗಂಟೆವರೆಗೂ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯ ನಡೆದಿದ್ದು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಡೆಯ ಬಾಲ್‌ವರೆಗೂ ಮ್ಯಾಚ್‌ ನೋಡಿದ ಕ್ರೀಡಾಭಿಮಾನಿಗಳಿಗೆ ಸಖತ್‌ ಖುಷಿಯಾಗಿದೆ.

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ. 10 ವರ್ಷಗಳ ಬಳಿಕ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತು. 172 ರನ್‌ಗಳ ಗುರಿ ಬೆನ್ನತ್ತಿದ ಆಂಗ್ಲರ ಪಡೆ 16.4 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 103 ರನ್‌ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

2007ರಲ್ಲಿ ಮೊದಲ ಬಾರಿಗೆ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಿತ್ತು. ಆಗಲೂ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣಸಿತ್ತು. ಈಗ ಭಾರತಕ್ಕೆ ಮತ್ತೆ ಚಾಂಪಿಯನ್‌ ಆಗುವ ಅವಕಾಶ ಲಭಿಸಿದೆ. ಶನಿವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹಿಟ್‌ಮ್ಯಾನ್‌ ರೋಹಿತ್‌ ಪಡೆ ಎದುರಿಸಲಿದೆ

ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್‌ ಮಾಡಿತು. ಮಳೆ ಕಾರಣಕ್ಕೆ ಪಂದ್ಯವು 75 ನಿಮಿಷ ತಡವಾಗಿ ಆರಂಭವಾಯಿತು. ಬ್ಯಾಟಿಂಗ್‌ ಮಾಡಿದ ಭಾರತ 8 ಓವರ್‌ಗಳಿಗೆ 65 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿತ್ತು. ಆಗ ಮತ್ತೆ ಮಳೆ ಬಂದು ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಅರ್ಧ ಗಂಟೆ ಬಳಿಕ ಮತ್ತೆ ಪಂದ್ಯ ಆರಂಭವಾಯಿತು.

ಇನ್ನು ಈ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕುಲದೀಪ್ ಯಾದವ್ ಮತ್ತು ಅಕ್ಸರ್ ಪಟೇಲ್ ಜೋಡಿ ಇಂಗ್ಲೆಂಡ್ ದಾಂಡಿಗರನ್ನು ಇನ್ನಿಲ್ಲದಂತೆ ಕಾಡಿತು. ಈ ಜೋಡಿ ತಲಾ 3 ವಿಕೆಟ್ ಪಡೆದು ಭಾರತ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಅಕ್ಸರ್ 4 ಓವರ್ ಎಸೆದು 23 ರನ್ ನೀಡಿ ಮೂರು ವಿಕೆಟ್ ಪಡೆದರೆ, ಕುಲದೀಪ್ 4 ಓವರ್ ಎಸೆದು ಕೇವಲ 19ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

ಇನ್ನು ಇಂದಿನ ಗೆಲುವಿನೊಂದಿಗೆ ಭಾರತ ತಂಡ ಫೈನಲ್ ಗೇರಿದ್ದು, ಬಾರ್ಬೋಡಾಸ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!