ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಪ್ರತಿ ಪಂದ್ಯದಲ್ಲೂ ತಮ್ಮ ಪ್ರದರ್ಶನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಈ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಈ ವರ್ಷದ ಕೊನೆಯ ಪಂದ್ಯದಲ್ಲೂ ತಮ್ಮ ಮ್ಯಾಜಿಕ್ ತೋರಿದ ಬುಮ್ರಾ ಒಟ್ಟು 9 ವಿಕೆಟ್ ಪಡೆಯುವ ಮೂಲಕ ಈ ವರ್ಷವನ್ನು ಮುಗಿಸಿದ್ದಾರೆ. ಈ ಅದ್ಭುತ ಪ್ರದರ್ಶನದ ಫಲವಾಗಿ ಇದೀಗ ಬುಮ್ರಾ ಅವರನ್ನು ಐಸಿಸಿ ಅತಿದೊಡ್ಡ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ವರ್ಷದ ಅತ್ಯುತ್ತಮ ಕ್ರಿಕೆಟಿಗನಿಗೆ ನೀಡುವ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಗೆ ಬುಮ್ರಾ ಅವರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ.
ಇದೀಗ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಬುಮ್ರಾ ಇದರ ಜೊತೆಗೆ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದ್ದಾರೆ.
ಈ ವರ್ಷ, ಬುಮ್ರಾ ಟೆಸ್ಟ್ ಮತ್ತು ಟಿ 20 ಮಾದರಿಯಲ್ಲಿ ಮಾತ್ರ ತಂಡವನ್ನು ಪ್ರತಿನಿಧಿಸಿದ್ದು, ತಮ್ಮ ಮಾರಕ ಬೌಲಿಂಗ್ನಿಂದ ಟೀಂ ಇಂಡಿಯಾಕ್ಕೆ ಅನೇಕ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 2024ರ ಟಿ20 ವಿಶ್ವಕಪ್ನಲ್ಲಿ ಗರಿಷ್ಠ 15 ವಿಕೆಟ್ಗಳನ್ನು ಕಬಳಿಸುವ ಮೂಲಕ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದ ಬುಮ್ರಾ ಪಂದ್ಯಾವಳಿಯ ಆಟಗಾರರಾಗಿಯೂ ಆಯ್ಕೆಯಾಗಿದ್ದರು. ಇದರ ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿಯೂ ಅಬ್ಬರಿಸಿರುವ ಬುಮ್ರಾ ಇಂಗ್ಲೆಂಡ್, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಈಗ ಆಸ್ಟ್ರೇಲಿಯಾದಂತಹ ತಂಡಗಳ ವಿರುದ್ಧವೂ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ವರ್ಷ 13 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ 71 ವಿಕೆಟ್ ಪಡೆದಿದ್ದಾರೆ. ಬುಮ್ರಾರನ್ನು ಹೊರತುಪಡಿಸಿ ಮತ್ತ್ಯಾವ ಬೌಲರ್ಗೂ ಈ ವರ್ಷ ಇಷ್ಟು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.