ಬಾರ್ಬಡೋಸ್‌ ನಲ್ಲಿ ಸಿಲುಕಿದ ಟೀಮ್ ಇಂಡಿಯಾ ಆಟಗಾರರು: ಜಿಂಬಾಬ್ವೆ ಸರಣಿಗೆ ಸುದರ್ಶನ್‌, ರಾಣಾ, ಜಿತೇಶ್‌ ಆಯ್ಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜುಲೈ 6 ರಿಂದ ಆರಂಭಗೊಳ್ಳಲಿರುವ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಈಗಾಗಲೇ ಭಾರತ ತಂಡ ಪ್ರಕಟಗೊಂಡಿದೆ.
ಆದ್ರೆ ಚಂಡಮಾರುತ ಅಪ್ಪಳಿಸಿದ್ದರಿಂದಾಗಿ ಜಿಂಬಾಬ್ವೆ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗಿದ್ದ ಯಶಸ್ವಿ ಜೈಸ್ವಾಲ್‌ , ಶಿವಂ ದುಬೆ ಹಾಗೂ ಸಂಜು ಸ್ಯಾಮ್ಸನ್‌ ಬಾರ್ಬಡೋಸ್‌ನಲ್ಲೇ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ20 ಆಯ್ಕೆ ಸಮಿತಿ ಮೊದಲ 2 ಪಂದ್ಯಗಳಿಗೆ ಸಾಯಿ ಸುದರ್ಶನ್‌, ಹರ್ಷಿತ್‌ ರಾಣಾ ಹಾಗೂ ಜಿತೇಶ್‌ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.

ಜೈಸ್ವಾಲ್‌, ಶಿವಂ ದುಬೆ, ಸಂಜು ಸ್ಯಾಮ್ಸನ್‌ ಭಾರತ ಟಿ20 ವಿಶ್ವಕಪ್‌ ತಂಡದ ಭಾಗವಾಗಿದ್ದರು. ಆದ್ರೆ ಚಂಡಮಾರುತದಿಂದಾಗಿ ಇಡೀ ತಂಡ ಬಾರ್ಬಡೋಸ್‌ನಲ್ಲೇ ಬೀಡುಬಿಟ್ಟಿದೆ. ಅವರು ಭಾರತಕ್ಕೆ ಬಂದ ನಂತರ ಜಿಂಬಾಬ್ವೆ ಸರಣಿಗೆ ಕಳುಹಿಸಲಾಗುತ್ತದೆ. ಹಾಗಾಗಿ 5 ಪಂದ್ಯಗಳ ಸರಣಿಯ ಮೊದಲ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಸ್ಯಾಮ್ಸನ್‌, ದುಬೆ ಹಾಗೂ ಜೈಸ್ವಾಲ್‌ ಬದಲಿಗೆ ಸುದರ್ಶನ್‌, ರಾಣಾ ಹಾಗೂ ಜಿತೇಶ್‌ ಶರ್ಮಾ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದೇ ಜುಲೈ 6 ರಿಂದ ಜುಲೈ 14ರ ವರೆಗೆ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ 4 ಪಂದ್ಯಗಳು ಸಂಜೆ 4:30ಕ್ಕೆ ಹಾಗೂ ಒಂದು ಪಂದ್ಯ ರಾತ್ರಿ 9:30ಕ್ಕೆ ಆರಂಭವಾಗಲಿದೆ. 5 ಪಂದ್ಯಗಳು ಜಿಂಬಾಬ್ವೆಯ ಹರಾರೆ ಸ್ಫೋರ್ಟ್‌ಕ್ಲಬ್‌ ಮೈದಾನದಲ್ಲಿ ನಡೆಯಲಿದೆ.

ಕೆರೀಬಿಯನ್ ದ್ವೀಪಗಳಲ್ಲಿ ಜುಲೈ 1ರ ಬೆಳಗ್ಗಿನ ಜಾವದಿಂದಲೇ ಚಂಡಮಾರುತ ಬೀಸುತ್ತಿರುವುದರಿಂದ ವಿಮಾನಯಾನವೂ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸದ್ಯಕ್ಕೆ ಸೇವೆ ಸ್ಥಗಿತಗೊಳಿಸಲಾಗಿದೆ .ಬಾರ್ಬಡೋಸ್ ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ಬಿರುಗಾಳಿಯ ತೀವ್ರತೆಯೂ ಹೆಚ್ಚಾಗಿದ್ದು, ಅಪಾಯಮಟ್ಟದಲ್ಲಿದೆ. ಹಾಗಾಗಿ ಟೀಂ ಇಂಡಿಯಾ ತವರಿಗೆ ಮರಳುವುದು ಇನ್ನೂ ಮೂರು ದಿನ ತಡವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

ಭಾರತ ತಂಡ:
ಶುಭಮನ್‌ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌), ಶಿವಂ ದುಬೆ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಅವೇಶ್ ಖಾನ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ. ಬದಲಾದ ಆಟಗಾರರು ಸಾಯಿ ಸುದರ್ಶನ್‌, ಹರ್ಷಿತ್‌ ರಾಣಾ ಹಾಗೂ ಜಿತೇಶ್‌ ಶರ್ಮಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!