ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಸೈಬರ್ ವಂಚಕರ ‘ಡಿಜಿಟಲ್ ಅರೆಸ್ಟ್’ ತಂತ್ರಕ್ಕೆ ಬಲಿಯಾಗಿ ತಮ್ಮ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ಸುಮಾರು ₹2 ಕೋಟಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ವಿಜ್ಞಾನ ನಗರದಲ್ಲಿ ಬೆಳಕಿಗೆ ಬಂದಿದೆ.
ಘಟನೆ ವಿವರ:
ನ್ಯೂ ತಿಪ್ಪಸಂದ್ರ ನಿವಾಸಿ ಹಾಗೂ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಮಹಿಳೆಗೆ ಕೆಲವು ತಿಂಗಳ ಹಿಂದೆ ‘ಬ್ಲೂ ಡಾರ್ಟ್ ಕೊರಿಯರ್’ ಹೆಸರಿನಲ್ಲಿ ಕರೆ ಬಂದಿತ್ತು. ತಕ್ಷಣವೇ ಅಪರಿಚಿತರು ತಮ್ಮನ್ನು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡು, ಅವರ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಗೇಜ್ ಪತ್ತೆಯಾಗಿದ್ದು, ಅದರಲ್ಲಿ ಅಕ್ರಮ ವಸ್ತುಗಳಿವೆ ಎಂದು ಬೆದರಿಕೆ ಹಾಕಿದ್ದಾರೆ.
ಬಳಿಕ, ವಂಚಕರು ವಿಡಿಯೋ ಕಾಲ್ ಮೂಲಕ ಮಹಿಳೆಗೆ ‘ನಾವು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ’ ಎಂದು ಹೆದರಿಸಿದ್ದಾರೆ. ವಿಚಾರಣೆಗೆ ಸಹಕರಿಸುವಂತೆ ನಂಬಿಸಿ, ‘ವೆರಿಫಿಕೇಶನ್ ಪ್ರಕ್ರಿಯೆ ಮುಗಿಯುವವರೆಗೆ ಎಲ್ಲೂ ಹೋಗಬಾರದು. ನಾವು ಹೇಳುವ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಬೇಕು ಮತ್ತು ನಾವು ಹೇಳಿದಷ್ಟು ಹಣವನ್ನು ಖಾತೆಗೆ ಜಮಾ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಮಹಿಳೆ ಸಹಕರಿಸದಿದ್ದರೆ ‘ಮಗನ ಭವಿಷ್ಯಕ್ಕೆ ತೊಂದರೆ ಆಗುತ್ತದೆ’ ಎಂದು ನಕಲಿ ಪೊಲೀಸರು ಬೆದರಿಕೆ ಹಾಕಿದ್ದಾರೆ. ಇದರಿಂದ ತೀವ್ರವಾಗಿ ಹೆದರಿದ ಟೆಕ್ಕಿ, ವಂಚಕರ ಸೂಚನೆಯಂತೆ ನಡೆದುಕೊಂಡಿದ್ದಾರೆ.
ಹಣ ವರ್ಗಾವಣೆ ಮಾಡಲು ಅನಿವಾರ್ಯವಾಗಿ ಮಹಿಳೆ ಮಾಲೂರಿನಲ್ಲಿದ್ದ ತಮ್ಮ ಎರಡು ಸೈಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಅಷ್ಟೇ ಅಲ್ಲದೆ, ವಿಜ್ಞಾನ ನಗರದಲ್ಲಿದ್ದ ತಮ್ಮ ಫ್ಲಾಟ್ ಅನ್ನು ಕೂಡ ಮಾರಾಟ ಮಾಡಿ, ಐಸಿಐಸಿಐ ಬ್ಯಾಂಕ್‌ನಲ್ಲಿ ಸಾಲವನ್ನೂ ಪಡೆದಿದ್ದಾರೆ. ಈ ರೀತಿ ಹಂತ ಹಂತವಾಗಿ ಸೈಬರ್ ಖದೀಮರ ಖಾತೆಗೆ ಸುಮಾರು ₹2 ಕೋಟಿ ಹಣವನ್ನು ಜಮಾ ಮಾಡಿದ್ದಾರೆ.
ಹಣ ಕಳೆದುಕೊಂಡ ಬಳಿಕ ತಾನು ವಂಚನೆಗೆ ಒಳಗಾಗಿರುವ ಅರಿವು ಆ ಮಹಿಳೆಗೆ ಬಂದಿದೆ. ತಕ್ಷಣ ಅವರು ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಯಾವುದೇ ಪೊಲೀಸ್ ಇಲಾಖೆಯು ಫೋನ್ ಅಥವಾ ವಿಡಿಯೋ ಕಾಲ್ ಮೂಲಕ ಯಾರನ್ನೂ ‘ಅರೆಸ್ಟ್’ ಮಾಡುವುದಿಲ್ಲ. ‘ಡಿಜಿಟಲ್ ಅರೆಸ್ಟ್’ ಎಂಬುದು ವಂಚಕರ ತಂತ್ರವಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರು ಇಂತಹ ವಂಚನೆ ಜಾಲಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.

