ಮಗ, ಅಳಿಯ, ಮೊಮ್ಮಗನನ್ನು ಗೆಲ್ಲಿಸಬೇಕೆಂದು ದೇವೇಗೌಡರಿಂದ ಕಣ್ಣೀರು: ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೂರು ಸ್ಥಾನಗಳಿಗಾಗಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಹೆಸರು ಮತ್ತು ಪಕ್ಷವನ್ನು ಬಿಜೆಪಿಗೆ ಅಡ್ಡವಿಟ್ಟರು. ಈಗ ಮಗ, ಅಳಿಯ, ಮೊಮ್ಮಗನನ್ನು ಗೆಲ್ಲಿಸಬೇಕೆಂದು ನಾಟಕವಾಡುತ್ತಾ, ಕಣ್ಣೀರು ಹಾಕುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ರಾಮನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಜೆಡಿಎಸ್ ಸ್ಪರ್ಧೆ ಮಾಡಿರುವ ಮೂರು ಕ್ಷೇತ್ರಗಳು ಹಾಗೂ ಅವರ ಅಳಿಯ ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು.

ಬಿಜೆಪಿ ಜೊತೆಗೆ ಸೀಟಿಗೆ ಕಿತ್ತಾಡಿಕೊಂಡು ಕೇವಲ ಮೂರು ಸೀಟುಗಳನ್ನು ಪಡೆದುಕೊಂಡರು. ತಮ್ಮ ಅಳಿಯನನ್ನು ಆ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಈಗ ತಮ್ಮ ಕುಟುಂಬದವರ ಗೆಲುವಿಗಾಗಿ ಕಣ್ಣೀರು ಹಾಕುತ್ತಿದ್ದು, ಆ ಕಣ್ಣೀರು ರಾಮನಗರದ ಕೊಚ್ಚೆಯಲ್ಲಿ ಸೇರಿಕೊಂಡಿದೆ ಎಂದರು.

ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿದಾಗ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಿದ್ದೇವು, ಅವರು ಬರಲಿಲ್ಲ. ದೇವೇಗೌಡರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗಲೇ ಪ್ರಧಾನಿ ಮೋದಿಯವರಿಗೆ ನೀರಾವರಿ ಯೋಜನೆಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿ ಸಹಿ ಹಾಕುವಂತೆ ಕೇಳಬಹುದಿತ್ತಲ್ಲ. ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.

ಆ ಕುಮಾರಸ್ವಾಮಿಗೆ ಮೈತುಂಬ ದ್ವೇಷ ತುಂಬಿದೆ. ತಾವು ಸೋಲುವ ಸಮಯ ಬಂದಾಗ ಪತ್ನಿಯನ್ನು ನಿಲ್ಲಿಸಿದ್ದರು. ಈಗ ಭಾವನನ್ನು ನಿಲ್ಲಿಸಿದ್ದಾರೆ. ನನಗೆ ವಿಷ ಇಟ್ಟರೆಂದು ಹೇಳುತ್ತಾರೆ. ನಾನು ಯಾವ ರೀತಿ ವಿಷ ಇಟ್ಟೆ ಎಂದು ಹೇಳಲಿ. ನಾನಲ್ಲ ಕುಮಾರಸ್ವಾಮಿಯೇ ದಳ ಮುಗಿಸಿಬಿಟ್ಟ, ಇನ್ನು ದಳ ಮುಗಿದು ಹೋಯಿತು ಎಂದು ಹೇಳಿದರು.

ಮಾಜಿ ಪ್ರಧಾನಿ ದೇವೇಗೌಡರ ಮಗ ಮಂಡ್ಯದಿಂದ, ಮೊಮ್ಮಗ ಹಾಸನದಿಂದ, ಅಳಿಯ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಮತದಾರರು ಇವರ ಮಾತುಗಳಿಗೆ ಮೋಸಹೋಗಬೇಡಿ. ಕುಟುಂಬ ರಾಜಕಾರಣ ಮಾಡುವವರನ್ನು ಬಿಟ್ಟು, ಅಭಿವೃದ್ಧಿ ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!