ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪತ್ನಿ ಮತ್ತು ಅತ್ತೆಯ ಕಿರುಕುಳಕ್ಕೆ ಬೇಸತ್ತು ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಎಟವಾದಲ್ಲಿ ನಡೆದಿದೆ.
ಮೋಹಿತ್ ಯಾದವ್ (33) ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್. ಆತ್ಮಹತ್ಯೆಗೂ ಮುನ್ನ ಮಾಡಿರುವ ವೀಡಿಯೋದಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಳು ಎಂದು ಆರೋಪಿಸಿದ್ದಾರೆ. ‘ನನ್ನ ಮರಣದ ನಂತರವೂ ನನಗೆ ನ್ಯಾಯ ಸಿಗದಿದ್ದರೆ, ನನ್ನ ಚಿತಾಭಸ್ಮವನ್ನು ಚರಂಡಿಗೆ ಎಸೆಯಿರಿ’ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.
ಯಾದವ್ ಎಟವಾ ರೈಲ್ವೆ ನಿಲ್ದಾಣದ ಹೊರಗಿನ ಹೋಟೆಲ್‌ವೊಂದರಲ್ಲಿ ಉಳಿದಿದ್ದರು. ಬೆಳಗ್ಗೆ ಹೋಟೆಲ್ ಕೊಠಡಿಯಿಂದ ಹೊರಹೋಗಿರಲಿಲ್ಲ. ಸಂಜೆ ಕೊಠಡಿಯಲ್ಲಿ ನೇತಾಡುತ್ತಿರುವುದನ್ನು ಹೋಟೆಲ್ ಸಿಬ್ಬಂದಿ ಗಮನಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಭಯ್ ನಾಥ್ ತ್ರಿಪಾಠಿ ತಿಳಿಸಿದ್ದಾರೆ.
ಯಾದವ್ ಸಿಮೆಂಟ್ ಕಂಪನಿಯಲ್ಲಿ ಕ್ಷೇತ್ರ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 7 ವರ್ಷಗಳ ಪ್ರೀತಿಯಲ್ಲಿದ್ದ ಪ್ರಿಯಾ ಎಂಬಾಕೆಯ ಜೊತೆ 2023 ರಲ್ಲಿ ಮದುವೆಯಾಗಿದ್ದರು.
ಇತ್ತ ನನ್ನ ಮನೆ ಮತ್ತು ಆಸ್ತಿಯನ್ನು ನಾನು ಅವಳ ಹೆಸರಿನಲ್ಲಿ ನೋಂದಾಯಿಸದಿದ್ದರೆ, ಅವಳು ನನ್ನ ಕುಟುಂಬವನ್ನು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಪತ್ನಿ ಬೆದರಿಕೆ ಹಾಕಿದ್ದಳು. ಆಕೆಯ ತಂದೆ ಮನೋಜ್ ಕುಮಾರ್ ಸುಳ್ಳು ದೂರು ಸಲ್ಲಿಸಿದ್ದರು. ಆಕೆಯ ಸಹೋದರ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಟೆಕ್ಕಿ ವೀಡಿಯೋದಲ್ಲಿ ಆರೋಪಿಸಿದ್ದಾನೆ.