ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಂಗಿಕ ಸಮಸ್ಯೆಗಳೂ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ‘ಗುರೂಜಿ’ಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಿಜಯ್ ಗುರೂಜಿ ಬಂಧಿತ ಆರೋಪಿ. ಆರೋಪಿಗೆ ಸಹಕಾರ ನೀಡುತ್ತಿದ್ದ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ. ರಸ್ತೆ ಪಕ್ಕದಲ್ಲಿ ಟೆಂಟ್‌ನಲ್ಲಿ ಕುಳಿತು ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಜಾಹೀರಾತು ಹಾಕಿ, ನಕಲಿ ಔಷಧಿಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ.
ವಂಚನೆಗೊಳಗಾದ ಟೆಕ್ಕಿ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಂಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾಗ, ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಟೆಂಟ್ ಒಂದರಲ್ಲಿ `ಲೈಂಗಿಕ ಸಮಸ್ಯೆಗೆ ಆಯುರ್ವೇದಿಕ್ ಚಿಕಿತ್ಸೆ’ ಎಂಬ ಜಾಹೀರಾತನ್ನು ಗಮನಿಸಿದ್ದಾರೆ. ಅದೇ ಭರವಸೆಯಿಂದ ಟೆಂಟ್‌ನಲ್ಲಿದ್ದ ವಿಜಯ್ ಗುರೂಜಿಯನ್ನು ಸಂಪರ್ಕಿಸಿದ್ದಾರೆ.
ಈ ವೇಳೆ ಗುರೂಜಿ ಟೆಕ್ಕಿಗೆ `ದೇವರಾಜ್ ಬೂಟಿ’ ಎಂಬ ಔಷಧಿಯನ್ನು ಖರೀದಿಸಲು ಸೂಚಿಸಿದ್ದಾನೆ. ಒಂದು ಗ್ರಾಂ ಔಷಧಿಗೆ 1.5 ಲಕ್ಷ ರೂ. ಎಂದು ಹೇಳಿದ್ದ ಗುರೂಜಿ, ಅದರಂತೆ ಟೆಕ್ಕಿಯಿಂದ 1,60,000 ರೂ. ಪಡೆದುಕೊಂಡಿದ್ದಾನೆ. ಈ ಔಷಧಿಗೆ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಬಾರದು ಮತ್ತು ಒಬ್ಬರೇ ಬಂದು ತೆಗೆದುಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದ. ಅದರಂತೆ ಟೆಕ್ಕಿ ಕೂಡ ಗುರೂಜಿಯ ಮಾತನ್ನು ನಂಬಿ ಹಣ ನೀಡಿದ್ದಾರೆ.
ಹಂತ ಹಂತವಾಗಿ ದೇವರಾಜ್ ಬೂಟಿ ಮತ್ತು `ಭವನ ಬೂಟಿ ತೈಲ’ ಹೆಸರಿನಲ್ಲಿ ದುಬಾರಿ ಔಷಧಿಗಳನ್ನು ಮಾರಾಟ ಮಾಡಿದ್ದಾನೆ. ಟೆಕ್ಕಿ ತಮ್ಮ ಲೈಂಗಿಕ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಬರೋಬ್ಬರಿ 17 ಲಕ್ಷ ರೂ. ಹಣ ಖರ್ಚು ಮಾಡಿ, ಔಷಧಿಗಳನ್ನು ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ, ಬ್ಯಾಂಕ್‌ನಲ್ಲಿ 20 ಲಕ್ಷ ರೂ. ಸಾಲ ಪಡೆದು, ಹೀಗೆ ಒಟ್ಟು 48 ಲಕ್ಷ ರೂ. ಹಣವನ್ನು ಗುರೂಜಿಗೆ ನೀಡಿದ್ದಾರೆ.
ಇಷ್ಟೆಲ್ಲಾ ದುಬಾರಿ ಔಷಧಿಗಳನ್ನು ಸೇವಿಸಿದರೂ ಟೆಕ್ಕಿಯ ಲೈಂಗಿಕ ಸಮಸ್ಯೆ ಪರಿಹಾರವಾಗಿಲ್ಲ. ಬದಲಿಗೆ, ಮತ್ತೆ ಅದೇ ಸಮಸ್ಯೆ ಶುರುವಾಗಿದೆ. ಚಿಕಿತ್ಸೆ ಗುಣಮುಖವಾಗದ ಬಗ್ಗೆ ಪ್ರಶ್ನಿಸಿದಾಗ, ಗುರೂಜಿ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನಂತರ ತಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಾಗ ರಕ್ತ ಪರೀಕ್ಷೆ ಮಾಡಿಸಿದಾಗ, ಆಯುರ್ವೇದ ಚಿಕಿತ್ಸೆಯಿಂದಾಗಿ ಕಿಡ್ನಿಗೆ ಸಮಸ್ಯೆ ಆಗಿರುವುದು ಪತ್ತೆಯಾಗಿದೆ.

