ಹೊಸದಿಗಂತ ಡಿಜಿಟಲ್ ಡೆಸ್ಕ್:
2003ರಲ್ಲಿ ಭಾವಿ ಪತಿ ಸಾಫ್ಟ್‌ವೇರ್ ಎಂಜಿನಿಯರ್ ಬಿ.ವಿ.ಗಿರೀಶ್ ಹತ್ಯೆ ಪ್ರಕರಣದಲ್ಲಿ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಸುಪ್ರಿಂ ಕೋರ್ಟ್ ಸೋಮವಾರ ಅಂತಿಮ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದ ನ್ಯಾ. ಎಂ.ಎಂ.ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರ ದ್ವಿಸದಸ್ಯ ಪೀಠ ಅಪರಾಧಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿದೆ.
ಪ್ರಕರಣ ಸಂಬಂಧ ತಮಗೆ ಜೀವಾವಧಿ ಶಿಕ್ಷೆ ವಿಧಿಸಿ 2010ರಲ್ಲಿ ಅಧೀನ ನ್ಯಾಯಾಲಯ ಮತ್ತು 2011ರಲ್ಲಿ ಹೈಕೋರ್ಟ್ ಹೊರಡಿಸಿದ್ದ ತೀರ್ಪು ರದ್ದುಪಡಿಸಬೇಕು ಮತ್ತು ತಮ್ಮನ್ನು ಖುಲಾಸೆಗೊಳಿಸಬೇಕು ಎಂದು ಕೋರಿ ಆರೋಪಿಗಳಾದ ಡಿ.ಅರುಣ್ ವರ್ಮಾ (ಎ-1). ಎ.ವೆಂಕಟೇಶ್ (ಎ-2), ದಿನೇಶ್ (ಎ-3) ಮತ್ತು ಶುಭಾ (ಎ-2) ಸುಪ್ರೀಂ ಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ಶುಭಾ ಹಾಗೂ ಪ್ರಕರಣ ಇತರೆ ಮೂವರು ಆರೋಪಿಗಳು ಸಂಚು ರೂಪಿಸಿ ಗಿರೀಶ್ ಅವರನ್ನು ಕೊಲೆ ಮಾಡಿರುವುದು ಎಲ್ಲ ಸಾಕ್ಷ್ಯಧಾರಗಳಿಂದ ಸಾಬೀತಾಗಿರುವುದರಿಂದ ಆರೋಪಿಗಳಿಗೆ ಹೈಕೋರ್ಟ್ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಲಾಗುತ್ತಿದೆ ಎಂದು ಸುಪ್ರಿಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಆಲೋಚನಾ ಶಕ್ತಿ ಹೆಚ್ಚಿರದ ಯೌವನದಲ್ಲಿ ದುಡುಕಿ ಕೊಲೆ ಮಾಡಿರುವುದರಿಂದ ರಾಜ್ಯಪಾಲರಲ್ಲಿ ಕ್ಷಮದಾನ ಕೋರಲು ಎಲ್ಲ ಆರೋಪಿಗಳಿಗೆ ಅವಕಾಶ ಕಲ್ಪಿಸಲು ಸುಪ್ರೀಂ ಕೋರ್ಟ್ ಇದೇ ವೇಳೆ ಆದೇಶಿಸಿದೆ.
ಶುಭಾ ತನ್ನ ಕಾಲೇಜು ಗೆಳೆಯ ಮತ್ತು ಇತರ ಇಬ್ಬರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು. ಅಪರಾಧಕ್ಕೆ ಕಾರಣವಾದ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದ ಕುಸಿತದ ಬಗ್ಗೆ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿತು.