ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಕಂಪನಿ ಸ್ಥಾಪಿಸಬೇಕು ಎಂಬ ಆಸೆ ಇದ್ದರೂ ಕಂಪನಿ ನೋಂದಣಿಗೆ 2 ತಿಂಗಳ ಕಾಲ ಕಷ್ಟಪಟ್ಟರೂ ಸಾಧ್ಯವಾಗದೇ ಟೆಕ್ಕಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದು, ಇದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ಕಂಪನಿ ನೋಂದಾಯಿಸಲು ಆಗದ್ದಕ್ಕೆ ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದ ಭಾರತೀಯ ಮೂಲದ ಅಮೆರಿಕ ಟೆಕಿಯೊಬ್ಬರಿಗೆ ನೆರವು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಎಂಬಿ ಪಾಟೀಲ್, ‘ನಿಮ್ಮ ಸಮಸ್ಯೆಯ ಬಗ್ಗೆ ಕೇಳಲು ಕ್ಷಮೆಯಾಚಿಸುತ್ತೇನೆ. ಕಂಪನಿಗಳ ಸ್ಥಾಪನೆಗೆ ಸಂಬಂಧಿಸಿದ ಕೆಲಸಗಳನ್ನು ಸಾಮಾನ್ಯವಾಗಿ ಸಿಎಸ್‌ಗಳು ನೋಡಿಕೊಳ್ಳುತ್ತಾರೆ ಎಂದರು.
ಸಂಬಂಧಪಟ್ಟ ಕಂಪನಿಗಳ ರಿಜಿಸ್ಟ್ರಾರ್ (RoC) ಕಡತಗಳನ್ನು ತೆರವುಗೊಳಿಸಲು 15-20 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. (ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಮತ್ತು ಎಲ್ಲಾ ರಾಜ್ಯಗಳಿಗೂ ಒಂದೇ ಆಗಿರುತ್ತದೆ). ಆದಾಗ್ಯೂ, ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ನಾವು ಅದನ್ನು ಪರಿಹರಿಸುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಟೆಕ್ಕಿ ಬ್ರಿಜ್ ಸಿಂಗ್ ಎನ್ನುವರು ಬೆಂಗಳೂರಿನಲ್ಲಿ ಕಂಪನಿ ತೆರೆಯಲು ಉತ್ಸುಕರಾಗಿದ್ದರು. ಇದಕ್ಕಾಗಿ ಕಳೆದ 2 ತಿಂಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಜ್ ಸಿಂಗ್ ತಮ್ಮ ನೂತನ ಕಂಪನಿ ನೋಂದಣಿಗೆ ಸಾಕಷ್ಟು ಅಲೆದಾಡಿದ್ದಾರೆ. ಕೊನೆಗೂ ಸಾಧ್ಯವಾಗದೇ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ.