ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಹೊರವರ್ತುಲ ರಸ್ತೆಯ ಅಗರ ಸಮೀಪ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ವೇಳೆ ಭಾರಿ ಅವಘಡವೊಂದು ಸಂಭವಿಸಿದೆ. ಇಂದು ಮುಂಜಾನೆ ಮೆಟ್ರೋ ನೀಲಿ ಮಾರ್ಗದ ಸ್ಟೀಲ್ ಗರ್ಡರ್ ಅಳವಡಿಸುವಾಗ ದೈತ್ಯ ಕ್ರೇನ್ ಒಂದು ಆಯತಪ್ಪಿ ತಲೆಕೆಳಗಾಗಿದೆ.
ಸುಮಾರು 100 ಟನ್ ತೂಕದ ಬೃಹತ್ ಸ್ಟೀಲ್ ಗರ್ಡರ್ ಅನ್ನು ಮೇಲೆತ್ತಲು 500 ಟನ್ ಸಾಮರ್ಥ್ಯದ ಕ್ರೇನ್ ಬಳಸಲಾಗುತ್ತಿತ್ತು. ಈ ವೇಳೆ ಕ್ರೇನ್‌ನ ಸ್ಥಿರತೆ ಕಾಯ್ದುಕೊಳ್ಳುವ ನಾಲ್ಕು ಜಾಕ್‌ಗಳಲ್ಲಿ ಒಂದು ಏಕಾಏಕಿ ಕಟ್ ಆಗಿದೆ. ಪರಿಣಾಮವಾಗಿ ಕ್ರೇನ್‌ನ ಒಂದು ಭಾಗ ನಿಯಂತ್ರಣ ತಪ್ಪಿ ಗಾಳಿಯಲ್ಲಿ ಮೇಲೆಕ್ಕೇರಿದ್ದು, ಕ್ರೇನ್ ಪಲ್ಟಿಯಾಗಿದೆ.
ಘಟನೆ ಸಂಭವಿಸಿದಾಗ ಸ್ಥಳದಲ್ಲಿ ಮೆಟ್ರೋ ಸಿಬ್ಬಂದಿ ಇದ್ದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ. “ಇದು ಕೇವಲ ತಾಂತ್ರಿಕ ಸಮಸ್ಯೆಯಿಂದಾದ ಅವಘಡ. ಗರ್ಡರ್ ಎತ್ತುವ ಸಮಯದಲ್ಲಿ ಜಾಕ್ ಕಟ್ ಆಗಿದ್ದೇ ಘಟನೆಗೆ ಮುಖ್ಯ ಕಾರಣ” ಎಂದು ಬಿಎಂಆರ್‌ಸಿಎಲ್ ಡೆಪ್ಯೂಟಿ ಚೀಫ್ ಇಂಜಿನಿಯರ್ ಸದಾಶಿವ ಅವರು ಮಾಹಿತಿ ನೀಡಿದ್ದಾರೆ.
ಸದ್ಯ ತಲೆಕೆಳಗಾಗಿರುವ ದೈತ್ಯ ಕ್ರೇನ್ ಅನ್ನು ಮೊದಲಿನ ಸ್ಥಿತಿಗೆ ತರಲು ಭರದ ಸಿದ್ಧತೆ ನಡೆಯುತ್ತಿದೆ. ಬಿದ್ದಿರುವ ಕ್ರೇನ್ ಎತ್ತಲು ಹೆಚ್ಚುವರಿ ಎರಡು ಬೃಹತ್ ಕ್ರೇನ್‌ಗಳನ್ನು ಸ್ಥಳಕ್ಕೆ ತರಿಸಲಾಗಿದೆ. ಒಂದು ಭಾಗಕ್ಕೆ ಹೆಚ್ಚಿನ ತೂಕ ಹಾಕಿ ಸಮತೋಲನಗೊಳಿಸುವ ಮೂಲಕ ಕ್ರೇನ್ ಕೆಳಗಿಳಿಸಲು ಇಂಜಿನಿಯರ್‌ಗಳ ತಂಡ ಶ್ರಮಿಸುತ್ತಿದೆ. ಈ ಕಾರ್ಯಾಚರಣೆಯಿಂದಾಗಿ ಈ ಭಾಗದ ವಾಹನ ಸಂಚಾರದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯ ಉಂಟಾಗಿದೆ.


