ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ಆಕಾಶ ಏರ್ ಸಂಸ್ಥೆಯ ಪುಣೆ–ಬೆಂಗಳೂರು ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ನಡೆದಿದೆ.
ನಿರ್ಗಮನಕ್ಕೆ ಸಿದ್ಧವಾಗಿದ್ದ ಬೋಯಿಂಗ್ 737 ಮ್ಯಾಕ್ಸ್ ವಿಮಾನದಲ್ಲಿ ಕೊನೆಯ ಕ್ಷಣದಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಆಕಾಶ ಏರ್‌ನ QP 1312 ವಿಮಾನವು ಬೆಳಗ್ಗೆ 8.50ಕ್ಕೆ ಪುಣೆಯಿಂದ ಹೊರಡಬೇಕಾಗಿತ್ತು. ಇದಕ್ಕೂ ಮೊದಲು ಬೆಳಗ್ಗೆ 8.10ರ ವೇಳೆಗೆ ಪ್ರಯಾಣಿಕರು ವಿಮಾನ ಹತ್ತಿದ್ದರು. ಆದರೆ ವಿಮಾನ ಟೇಕಾಫ್‌ಗೆ ಸಿದ್ಧವಾಗುತ್ತಿದ್ದಾಗ ತಾಂತ್ರಿಕ ಸಮಸ್ಯೆ ವರದಿಯಾದ ಕಾರಣ, ವಿಮಾನ ನಿಲ್ದಾಣದಲ್ಲೇ ತಡೆಹಿಡಿಯಲಾಯಿತು. ವಿಮಾನದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಾಯುತ್ತಿದ್ದ ಪ್ರಯಾಣಿಕರನ್ನು ಬಳಿಕ ಸುರಕ್ಷತಾ ದೃಷ್ಟಿಯಿಂದ ಕೆಳಗಿಳಿಸಲಾಗಿದೆ.
ಘಟನೆಯಿಂದ ಪ್ರಯಾಣಿಕರಿಗೆ ಅಸೌಕರ್ಯ ಉಂಟಾದರೂ, ಸುರಕ್ಷತೆಯೇ ಮೊದಲ ಆದ್ಯತೆ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.


