ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಹೇರ್ ಕಟ್ ಚಿಕ್ಕದಾಗಿದೆ ಎಂದು ತೀವ್ರ ಅಸಮಾಧಾನಗೊಂಡ ಬಾಲಕ 16 ನೇ ಮಹಡಿಯ ಸ್ನಾನಗೃಹದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಯ್ಯಾದರ್‌ನಲ್ಲಿ ನಡೆದಿದೆ.
13 ವರ್ಷದ ಬಾಲಕನಿಗೆ ಕುಟುಂಬದ ಸದಸ್ಯರು ಹೇರ್ ಕಟ್ ಮಾಡಿಸಿದ್ದಾರೆ. ಆದರೆ ತನ್ನ ಕೂದಲನ್ನು ತುಂಬಾ ಚಿಕ್ಕದಾಗಿ ಕತ್ತರಿಸಿದ್ದರಿಂದ ತಾಳ್ಮೆ ಕಳೆದುಕೊಂಡಿದ್ದಾನೆ. ತನ್ನ ಸ್ನೇಹಿತರ ಮುಂದೆ ಹೀಗೆ ಓಡಾಡಲು ಆಗಲ್ಲ, ಅವರು ಆಡಿಕೊಳ್ಳುತ್ತಾರೆಂದು ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.
ಅಷ್ಟು ಹೇಳಿ ಮೇಲೆ ಹೋದ ಬಾಲಕ ಅಪಾರ್ಟ್‌ಮೆಂಟ್ ಕಟ್ಟಡದ 16ನೇ ಮಹಡಿಯ ಬಾತ್ ರೂಂ ಕಿಟಕಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಾಹಿತಿ ಪಡೆದ ನವಗಢ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.