ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ತೀತೀರ ರೋಶನ್ ಅಪ್ಪಚ್ಚು

ಹೊಸದಿಗಂತ ವರದಿ ಮಡಿಕೇರಿ:

ಕರ್ನಾಟಕ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ಪದೋನ್ನತಿ ಹೊಂದಿರುವ ಕೊಡಗಿನ ತೀತೀರ ರೋಶನ್ ಅಪ್ಪಚ್ಚು ಅವರು, ಇದರೊಂದಿಗೆ ವಿದ್ಯುತ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಾಗಿಯೂ ನೇಮಕಗೊಂಡಿದ್ದಾರೆ.

ರಾಜ್ಯ ಸರ್ಕಾರದ ಇಂಧನ ಸಚಿವಾಲಯದ ಅಧೀನದಲ್ಲಿ ಬರುವ ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಪ್ರಭಾರ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿದ್ದ ತೀತಿರ ರೋಶನ್ ಅಪ್ಪಚ್ಚು ಅವರನ್ನು ಸರ್ಕಾರ ಇದೀಗ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಇದರೊಂದಿಗೆ ವಿದ್ಯುತ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳನ್ನಾಗಿ ನೇಮಕಗೊಳಿಸಿದೆ. ವಿದ್ಯುತ್ ಇಲಾಖೆಯಲ್ಲಿ ರಾಜ್ಯಕ್ಕೆ ಇದು ಏಕೈಕ ಹುದ್ದೆಯಾಗಿದ್ದು, ಇದೀಗ ಕೊಡಗಿನವರು ಇಲಾಖೆಯ ಮುಖ್ಯಸ್ಥರಾಗಿರುವುದು ವಿಶೇಷ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನವರಾದ ಹುದಿಕೇರಿಯವರಾದ ತೀತಿರ ರೋಶನ್ ಅಪ್ಪಚ್ಚು ಅವರು, ಹುದಿಕೇರಿಯ ಜಿಎಂಪಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಆರಂಭಿಸಿದ್ದು, ನಂತರ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ್ದರು. ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಇವರು ಕೋಲ್ಕತಾದ ಮೆಂಬರ್ ಆಫ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಮತ್ತು ದೆಹಲಿಯ ಮೆಂಬರ್ ಆಫ್ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್’ನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದರು.

ಆರಂಭದಲ್ಲಿ ಗೋಣಿಕೊಪ್ಪಲಿನ ಕಾವೇರಿ ಪಾಲಿಟೆಕ್ನಿಕ್’ನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದ ಇವರು, ನಂತರ 1994ರಲ್ಲಿ ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು. ನಂತರ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಆಗಿ, ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ, 2018ರಲ್ಲಿ ಡೆಪ್ಯುಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಬಡ್ತಿ ಹೊಂದಿ ನಂತರ ಪ್ರಭಾರ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕಗೊಂಡಿದ್ದರು.

ಹಿಂದಿನ ಸರ್ಕಾರ ಇರುವಾಗಲೇ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ಇವರು ನೇಮಕಗೊಂಡಿದ್ದರಾದರೂ, ಚುನಾವಣೆ ನೀತಿ ಸಂಹಿತೆಯಿಂದ ನೇಮಕಾತಿಯನ್ನು ತಡೆಹಿಡಿಯಲಾಗಿತ್ತು. ಇದೀಗ ನೂತನ ಸರ್ಕಾರ ಅಪ್ಪಚ್ಚು ಅವರನ್ನು ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸುವುದರ ಜೊತೆಗೆ ವಿದ್ಯುತ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಿಸಿ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!