ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈ ಏರ್ ಶೋ ವೇಳೆ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ತೇಜಸ್ ಯುದ್ಧವಿಮಾನ ದುರಂತದ ಹೊಸ ವಿವರಗಳು ಬೆಳಕಿಗೆ ಬಂದಿವೆ. ಹೊಸದಾಗಿ ಹೊರಬಂದ ವೀಡಿಯೊದಲ್ಲಿ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರು ಕೊನೆಯ ಕ್ಷಣಗಳವರೆಗೂ ವಿಮಾನದ ನಿಯಂತ್ರಣ ಮರುಪಡೆಯಲು ಹೋರಾಡಿದ ದೃಶ್ಯ ಕಾಣಿಸಿಕೊಂಡಿದೆ.
ಪೈಲಟ್ ಎಜೆಕ್ಟ್ ಆಗಲು ಪ್ರಯತ್ನಿಸಿದರೂ, ವಿಮಾನ ಕ್ಷಣಾರ್ಧದಲ್ಲೇ ನೆಲಕ್ಕೆ ಅಪ್ಪಳಿಸಿದ ಕಾರಣ ಅವರ ಜೀವ ಉಳಿಯಲಿಲ್ಲ ಎಂದು WL ಟಾನ್ ಏವಿಯೇಷನ್ ಹಂಚಿದ ದೃಶ್ಯ ಸ್ಪಷ್ಟಪಡಿಸಿದೆ.
ಈ ದುರಂತ ತೇಜಸ್ ಯುದ್ಧವಿಮಾನದ 24 ವರ್ಷದ ಪ್ರಯಾಣದಲ್ಲಿ ಸಂಭವಿಸಿದ ಎರಡನೇ ದೊಡ್ಡ ಅಪಘಾತವಾಗಿದ್ದು, ಕಳೆದ ದಶಕದ ಸೇವೆಯಲ್ಲಿ ಈ ವಿಮಾನಕ್ಕೆ ಸಂಬಂಧಿಸಿದ ಮೊದಲ ಮರಣ ಪ್ರಕರಣವಾಗಿದೆ. ಕಳೆದ ವರ್ಷದ ಜೈಸಲ್ಮೇರ್ ಬಳಿ ಸಂಭವಿಸಿದ ಅಪಘಾತದಲ್ಲಿ ಪೈಲಟ್ ಪಾರಾಗಲು ಯಶಸ್ವಿಯಾಗಿದ್ದರು.
ಹಿಮಾಚಲ ಪ್ರದೇಶದ ಕಾಂಗ್ರಾ ಮೂಲದ ವಿಂಗ್ ಕಮಾಂಡರ್ ಸಯಾಲ್ ಅವರ ಅಂತ್ಯಕ್ರಿಯೆ ಇಂದು (ನ.23) ನೆರವೇರಲಿದೆ ಎಂದು ತಿಳಿದು ಬಂದಿದೆ.

