Tuesday, November 18, 2025

ತೇಜಸ್ವಿ ಯಾದವ್-ರೋಹಿಣಿ ಆಚಾರ್ಯ ಕಲಹ: ಮೌನ ಮುರಿದ ಲಾಲು ಪ್ರಸಾದ್ ಯಾದವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೇಜಸ್ವಿ ಯಾದವ್ ಹಾಗೂ ಅಕ್ಕ ರೋಹಿಣಿ ಆಚಾರ್ಯ ನಡುವೆ ಭುಗಿಲೆದ್ದಿರುವ ಕೌಟುಂಬಿಕ ಕಲಹ ತಾರಕಕ್ಕೇರಿದೆ. ಈ ಅಕ್ಕ- ತಮ್ಮನ ಜಗಳದ ಬಗ್ಗೆ ಅವರ ತಂದೆ ಹಾಗೂ ಆರ್ ಜೆಡಿ ಪಕ್ಷದ ಧುರೀಣ ಲಾಲು ಪ್ರಸಾದ್ ಯಾದವ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಕೈಬರಹದ ಮೂಲಕ ಸಂದೇಶವನ್ನು ರವಾನಿಸಿರುವ ಅವರು, ‘ಇದು ನಮ್ಮ ಕುಟುಂಬದ ಆಂತರಿಕ ವಿಚಾರ. ಇದನ್ನು ಕುಟುಂಬದಲ್ಲೇ ಬಗೆಹರಿಸಿಕೊಳ್ಳುತ್ತೇವೆ. ಅದನ್ನು ನಿಭಾಯಿಸಲು ನಾನಿದ್ದೇನೆ’ ಎಂದು ಹೇಳಿದ್ದಾರೆ.

ಅವರ ಸಂದೇಶವನ್ನು ಸಭೆಯಲ್ಲಿ ಲಾಲು ಅವರ ಹಿರಿಯ ಪುತ್ರಿ ಹಾಗೂ ಪಾಟಲಿಪುತ್ರ ಜಿಲ್ಲೆಯ ಸಂಸದೆ ಮಿಸಾ ಭಾರತಿ ಅವರು ಓದಿ ತಿಳಿಸಿದ್ದಾರೆ.

‘ಪಕ್ಷದ ಕಾರ್ಯಕರ್ತರಾಗಲೀ, ನಾಯಕರಾಗಲಿ ನಮ್ಮ ಕುಟುಂಬದ ಆಂತರಿಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಅದು ನಮ್ಮೊಳಗಿನ ವಿಚಾರ. ನಾವೇ ಸರಿಪಡಿಸಿಕೊಳ್ಳುತ್ತೇವೆ. ಈಗ ನಮ್ಮ ಕುಟುಂಬದ ವಿಚಾರಕ್ಕಿಂತ ಹೆಚ್ಚಾಗಿ ನಾವು ಬಿಹಾರದ ಚುನಾವಣೆಗೂ ಮುನ್ನ ಎನ್ ಡಿಎ ನೀಡಿರುವ ವಾಗ್ದಾನಗಳಾದ ಬಿಹಾರದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ, ಜೀವಿಕಾ ದೀದಿಗಳಿಗೆ 2 ಲಕ್ಷ ರೂ. ಸಹಾಯಧನವನ್ನು ನೀಡುವುದು ಇತ್ಯಾದಿಗಳನ್ನು ನೀಡಲಾಗಿದೆ. ಅವುಗಳನ್ನು ಈಡೇರಿಸುತ್ತಾರೋ ಇಲ್ಲವೋ ಎಂಬುದನ್ನು ನಾವು ನಿಗಾ ಇಟ್ಟು ಪರಿಶೀಲಿಸಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದಿದ್ದ ಬಿಹಾರ ವಿಧಾನಸಭೆಯಲ್ಲಿ ಪಕ್ಷವು ಸೋತ ಬೆನ್ನಲ್ಲೇ ಆರ್ ಜೆಡಿ ನಾಯಕರಾದ ಲಾಲು ಅವರ ನಿವಾಸದಲ್ಲಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಅವರ ಅಕ್ಕ ರೋಹಿಣಿ ನಡುವೆ ದೊಡ್ಡ ಜಗಳವೇ ನಡೆದಿದ್ದಾಗಿ ಖುದ್ದು ರೋಹಿಣಿಯವರೇ ಆರೋಪಿಸಿದ್ದರು.

error: Content is protected !!