ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಒಟ್ಟು 35,655 ಮತಗಟ್ಟೆಗಳಲ್ಲಿ 3.26 ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸುತ್ತಿದ್ದು, 2,290 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಇಂದು ನಿರ್ಧರಿಸಲಿದ್ದಾರೆ.
ವಿಧಾನಸಭೆ ಚುನಾವಣೆಗೆ 2.5 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಭದ್ರತಾ ವ್ಯವಸ್ಥೆಗಳ ಭಾಗವಾಗಿ ರಾಜ್ಯಾದ್ಯಂತ 375 ಕಂಪನಿಗಳ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಜೊತೆಗೆ ರಾಜ್ಯ ಮತ್ತು ನೆರೆಯ ರಾಜ್ಯಗಳಿಂದ ಪೊಲೀಸರು ಮತ್ತು ಗೃಹರಕ್ಷಕರನ್ನು ಒಳಗೊಂಡ ಸುಮಾರು 77,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿಕಾಸ್ ರಾಜ್ ಮಾಹಿತಿ ನೀಡಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ಒಟ್ಟು 3,26,02,799 ಮತದಾರರಿದ್ದು, ಇದರಲ್ಲಿ 1,62,98,418 ಪುರುಷರು, 1,63,01,705 ಮಹಿಳೆಯರು ಮತ್ತು 2,676 ತೃತೀಯಲಿಂಗಿಗಳು ಇದ್ದಾರೆ. ಇವರಲ್ಲಿ 15,406 ಸೇವಾ ಮತದಾರರು ಮತ್ತು 2,944 ಎನ್‌ಆರ್‌ಐ ಮತದಾರರು ಸೇರಿದ್ದಾರೆ. 18-19 ವಯೋಮಾನದ ಮತದಾರರ ಸಂಖ್ಯೆ 9,99,667. 221 ಮಹಿಳೆಯರು ಮತ್ತು ಒಬ್ಬ ತೃತೀಯಲಿಂಗಿ ಸೇರಿದಂತೆ ಒಟ್ಟು 2,290 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಲ್ಲದೆ ಡಿಸೆಂಬರ್ 3ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.