ತೆಲಂಗಾಣ ಔಷಧ ಕಾರ್ಖಾನೆಯಲ್ಲಿ ಸ್ಫೋಟ: ಮೃತರ ಸಂಖ್ಯೆ 35ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಿಗಾಚಿ ಇಂಡಸ್ಟ್ರೀಸ್‌ನ ಪಾಶಮೈಲಾರಂನಲ್ಲಿರುವ ಔಷಧ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಅವಶೇಷಗಳಿಂದ 31 ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೂವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಅಂತಿಮ ಹಂತ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮಂಗಳವಾರ ಬೆಳಿಗ್ಗೆ ಅಪಘಾತ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್‌ನಲ್ಲಿ ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ಆದರೆ, ಸ್ಫೋಟಕ್ಕೆ ನಿಖರ ಕಾರಣ ಸಮಗ್ರ ಪರಿಶೀಲನೆಯ ಬಳಿಕವೇ ತಿಳಿಯಲಿದೆ ಎಂದು ತಾಂತ್ರಿಕ ತಜ್ಞರು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 9.28ರಿಂದ 9.35ರ ನಡುವೆ ಸ್ಫೋಟ ಸಂಭವಿಸಿತ್ತು. ಈ ವೇಳೆ ಕಾರ್ಖಾನೆಯಲ್ಲಿ 150 ಮಂದಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಸುಮಾರು 90 ಮಂದಿ ಸ್ಫೋಟ ನಡೆದ ಸ್ಥಳದ ಸಮೀಪದಲ್ಲೇ ಇದ್ದರು ಎಂದು ಕಾರ್ಖಾನೆಯ ಮೂಲಗಳನ್ನು ಉಲ್ಲೇಖಿಸಿ ಐಜಿಪಿ ವಿ.ಸತ್ಯನಾರಾಯಣ ಹೇಳಿದ್ದರು. ಸತ್ತವರಲ್ಲಿ ಕೆಲವರ ಮೃತದೇಹ ಸಂಪೂರ್ಣ ಸುಟ್ಟುಹೋಗಿದ್ದು, ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!