ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಂತಾರ: ಚಾಪ್ಟರ್ 1’ ಚಿತ್ರದ ಅಪ್ರತಿಮ ಯಶಸ್ಸಿನ ಬಳಿಕ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ತೆಲುಗು ಚಿತ್ರರಂಗದಲ್ಲಿಯೂ ಪಾದಾರ್ಪಣೆ ಮಾಡಲು ಸಜ್ಜಾಗಿದ್ದರು. ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರ ಈಗ ನಿರೀಕ್ಷೆಗೂ ಮೀರಿದ ಸಂಕಷ್ಟವನ್ನು ಎದುರಿಸುತ್ತಿದೆ. ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ವಿರುದ್ಧ ವಂಚನೆ ಹಾಗೂ ಮೋಸದ ಆರೋಪದ ಮೇಲೆ ನಿರ್ಮಾಪಕರ ಸಂಘ ಹಾಗೂ ಫಿಲಂ ಚೇಂಬರ್‌ನಲ್ಲಿ ಅಧಿಕೃತ ದೂರು ದಾಖಲಾಗಿದೆ.
ನಿರ್ಮಾಪಕ ನಿರಂಜನ್ ರೆಡ್ಡಿ ಅವರಿಗೆ 10 ಕೋಟಿ ರೂಪಾಯಿ ಮುಂಗಡ ಹಣ ನೀಡಿದ್ದರು. ಐದು ಸಿನಿಮಾಗಳನ್ನು ನಿರ್ದೇಶಿಸುವುದಾಗಿ ಭರವಸೆ ನೀಡಿದ ಪ್ರಶಾಂತ್ ವರ್ಮಾ, ‘ಅಧೀರ’, ‘ಮಹಾಕಾಳಿ’, ‘ಬ್ರಹ್ಮರಾಕ್ಷಸ’, ‘ಆಕ್ಟೊಪಸ್’ ಮತ್ತು ‘ಜೈ ಹನುಮಾನ್’ ಚಿತ್ರಗಳನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದರು. ಆದರೆ ಈಗ ತನಕ ಯಾವುದೇ ಚಿತ್ರವನ್ನು ಕೈಗೆತ್ತಿಕೊಳ್ಳದೆ ಸಮಯ ಕಳೆದುಹಾಕಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ಇದೇ ಸಮಯದಲ್ಲಿ, ಪ್ರಶಾಂತ್ ವರ್ಮಾ ಈಗ ‘ಜೈ ಹನುಮಾನ್’ ಚಿತ್ರವನ್ನು ಮತ್ತೊಂದು ಬ್ಯಾನರ್ ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ದೇಶಿಸಲು ಮುಂದಾಗಿದ್ದಾರೆ ಎನ್ನುವುದು ವಿವಾದದ ಮೂಲವಾಗಿದೆ. ನಿರಂಜನ್ ರೆಡ್ಡಿ, ತಮ್ಮ ಹಣದ ಹೂಡಿಕೆ ಹಾಗೂ ಪ್ರಾಜೆಕ್ಟ್‌ಗಳ ಯೋಜನೆ ಎಲ್ಲವೂ ವ್ಯರ್ಥವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಪ್ರಶಾಂತ್ ವರ್ಮಾ ವಿರುದ್ಧ ಇನ್ನೂ ಕೆಲ ನಿರ್ಮಾಪಕರು ಸಹ ಇದೇ ರೀತಿಯ ದೂರುಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಅವರು ಮುಂಗಡ ಹಣ ಪಡೆದುಕೊಂಡು, ಸಿನಿಮಾಗಳನ್ನು ಪೂರ್ಣಗೊಳಿಸದೆ ಸಮಯ ಕಳೆಯುತ್ತಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ.
ಮತ್ತೊಂದೆಡೆ, ಪ್ರಶಾಂತ್ ವರ್ಮಾ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ, ತಾವು ಯಾವುದೇ ರೀತಿಯ ವಂಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣ ಪ್ರಸ್ತುತ ನಿರ್ಮಾಪಕರ ಸಂಘ ಹಾಗೂ ಫಿಲಂ ಚೇಂಬರ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಪ್ರಶಾಂತ್ ವರ್ಮಾ ಅವರನ್ನು ವಿಚಾರಣೆಗಾಗಿ ಕರೆಯಲಾಗುವ ಸಾಧ್ಯತೆ ಇದೆ.

