ಹೊಸದಿಗಂತ ಉಳ್ಳಾಲ:
ಮಂಗಳೂರಿನ ನೇತ್ರಾವತಿ ಸೇತುವೆಯ ಆವರಣ ಗೋಡೆಗೆ ಬುಧವಾರ ಮಿನಿ ಟೆಂಪೋವೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಚಾಲಕ ಅಲ್ಪ ಗಾಯಗಳೊಂದಿಗೆ ಪಾರಾಗಿದ್ದರೂ, ಸುಮಾರು ಅರವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಬ್ಬಿಣದ ತಡೆಬೇಲಿ ಸಂಪೂರ್ಣ ಜಖಂಗೊಂಡಿದೆ.

ಈ ಹಿಂದೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸೇರಿದಂತೆ ಅನೇಕರು ಇದೇ ಸೇತುವೆಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದರು. ಅಂತಹ ದುರಂತಗಳನ್ನು ತಡೆಯಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು 63 ಲಕ್ಷ ರೂಪಾಯಿ ಅನುದಾನದಲ್ಲಿ ಸಿಸಿಟಿವಿ ಹಾಗೂ ಎತ್ತರದ ಬೇಲಿಯನ್ನು ಅಳವಡಿಸಿತ್ತು. ಕಳೆದ ಐದು ವರ್ಷಗಳಿಂದ ಈ ವ್ಯವಸ್ಥೆಯು ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿತ್ತು.
ಪ್ರಸ್ತುತ ಯೋಜನೆಯ ನಿರ್ವಹಣಾ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ವಹಿಸಲಾಗಿದೆ. ಆದರೆ, ಈಗ ಉಂಟಾಗಿರುವ ಬೃಹತ್ ಬಿರುಕಿನ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಾನಸಿಕ ಖಿನ್ನತೆ ಅಥವಾ ಸಂಕಷ್ಟದಲ್ಲಿರುವವರು ಇದನ್ನು ದುರುಪಯೋಗಪಡಿಸಿಕೊಳ್ಳುವ ಆತಂಕ ಎದುರಾಗಿದೆ. ಅನಾಹುತಗಳು ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



