ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ವಿರುದ್ಧ ತನಿಖೆಗೆ ಗವರ್ನರ್ ಆದೇಶ ನೀಡಿದ ಮೇಲೆ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂದು ನ್ಯಾ. ಎಂ ನಾಗಪ್ರಸನ್ನ ಅವರ ಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಯಿತು. ಸಿಎಂ ಪರವಾಗಿ ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 17A PC Act & 218 ಭಾರತೀಯ ದಂಡ ಸಂಹಿತೆ (BNS) ಅಡಿ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ವಿವೇಚನೆ ಇಲ್ಲದೇ ಶೋಕಾಸ್ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರು.
ಇದಕ್ಕೆ ರಾಜ್ಯಪಾಲರ ಪರ ಎಸ್‌ಜಿ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಪಾಲರು ಯಾವುದೇ ವಿವೇಚನೆ ಇಲ್ಲದೆ ನೋಟಿಸ್ ನೀಡಬಹುದು. ಅದು ಚರ್ಚೆಯ ವಿಷಯವೇ ಅಲ್ಲ ಎಂದು ಪ್ರತಿವಾದ ಮಂಡಿಸಿದರು.
ಅಭಿಷೇಕ್ ಸಿಂಘ್ವಿ ವಾದ ಮಂಡಿಸಿ, ಪ್ರಕರಣದಲ್ಲಿ ಸಂವಿಧಾನಾತ್ಮಕ ಮತ್ತು ಆಡಳಿತಾತ್ಮಕ ವಿಚಾರಗಳಿವೆ. ನಾಳೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ಬಾಕಿ ಇದೆ. ಗವರ್ನರ್ ಆದೇಶ ನೀಡುವ ಮುನ್ನ ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಆದರೆ, ಗವರ್ನರ್ ಯಾವ ಆಧಾರ ಇಲ್ಲದೆಯೂ ಅನುಮತಿ ನೀಡಿದ್ದಾರೆ ಎಂದು ಹೇಳಿದರು.
ಶೋಕಾಸ್ ನೋಟಿಸ್ ನೀಡಿದ್ದಕ್ಕೆ ಕೊಟ್ಟ ಉತ್ತರವನ್ನು ಅವರು ಹೇಳಿಲ್ಲ. ಇಲ್ಲಿ ರಾಜ್ಯಪಾಲರಿಗೆ ಸಿಎಂ ರಾಜೀನಾಮೆ ಕೊಡುವುದು ಮಾತ್ರ ಬೇಕಿದೆ. ಅದಕ್ಕೆ ಒಂದೇ ಒಂದು ಸರಿಯಾದ ಕಾರಣ ನೀಡದೇ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರಿ 17ಎ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ಇದಕ್ಕೆ ಕನಿಷ್ಠ ಎರಡು ನಿಯಮಗಳಿವೆ. ನೂರು ಪುಟಗಳ ಕ್ಯಾಬಿನೆಟ್ ನಿರ್ಧಾರಕ್ಕೆ ರಾಜ್ಯಪಾಲರು ಕೇವಲ ಎರಡು ಪುಟಗಳ ಉತ್ತರ ನೀಡಿದ್ದಾರೆ. ಸಂಪುಟದ ನಿರ್ಧ ರ ಪರಿಗಣಿಸಲ್ಲ ಎಂದಿದ್ದಾರೆ. ಯಾವ ತನಿಖಾಧಿಕಾರಿ ಕೇಳಿದ್ದಾರೆ ಅನ್ನೋದು ಮುಖ್ಯ. ಅಲ್ಲದೆ ಯಾವ ಆರೋಪವಿದೆ ಅನ್ನೋದು ಅವರು ಹೇಳಬೇಕಿತ್ತು? ಬಿಎನ್‌ಎಸ್ ಎಸ್ 218 ಅಡಿಯೂ ಅನುಮತಿ ನೀಡಿದ್ದಾರೆ ಎಂದರು.
ಗವರ್ನರ್ ತಮ್ಮ ಆದೇಶದಲ್ಲಿ ಮಧ್ಯಪ್ರದೇಶ ಸರ್ಕಾರ & ಮಧ್ಯಪ್ರದೇಶ ಪೊಲೀಸ್ ಎಸ್ಟಾಬ್ಲಿಷ್ ಕೇಸ್ ಉಲ್ಲೇಖ ಮಾಡಿದ್ದಾರೆ ಎಂದು ಆರ್ಟಿಕಲ್ 163 ಬಗ್ಗೆ ಮನು ಸಿಂಘ್ವಿ ಉಲ್ಲೇಖಿಸಿ, ಹೌದು, ರಾಜ್ಯಪಾಲರಿಗೆ ಅಧಿಕಾರ ಇದೆ. ಆದರೆ ಒಂದು ಲೈನ್‌ನಲ್ಲಿ ಕ್ಯಾಬಿನೆಟ್ ನಿರ್ಧಾರ ತಿರಸ್ಕರಿಲು ಸಾಧ್ಯವಿಲ್ಲ. ಹಗರಣ ಸಂಬಂಧ ಮೂವರು ಅನುಮತಿ ಕೇಳಿದ್ದಾರೆ. ಟಿ.ಜೆ. ಅಬ್ರಹಾಂ ದೂರು ಕೊಟ್ಟ ದಿನವೇ ಶೋಕಾಸ್ ನೋಟಿಸ್ ನೀಡಿದ್ದಾರೆ. ಸಾಮಾನ್ಯವಾಗಿ ಒಂದು ದೂರು ನೀಡಿದರೆ ಅದನ್ನು ಪರಿಶೀಲನೆ ಮಾಡಲು ಸಮಯ ಬೇಕು. ಆದರೆ ದೂರು ನೀಡಿದ ದಿನವೇ ಶೋಕಾಸ್ ನೊಟೀಸ್ ನೀಡಿದ್ದಾರೆ. ಅಲ್ಲದೇ ಗವರ್ನರ್ ಮುಂದೆ 12 ಪ್ರಕರಣಗಳಲ್ಲಿ ಅನುಮತಿ ಕೇಳಲಾಗಿದೆ. ಆದರೆ ಅವುಗಳನ್ನು ಇನ್ನೂ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲ್ಯಾಂಡ್ ಡಿನೋಟಿಫಿಕೇಷನ್ ಪ್ರಕ್ರಿಯೆ ಹಾಗೂ ಭೂ ಪರಿವರ್ತನೆ ಸೇರಿ ಇಲ್ಲಿಯವರೆಗೆ ನಡೆದ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ವಕೀಲ ಮನು ಸಿಂಘ್ವಿ ವಾದ ಮಂಡಿಸಿ, 2004 ರಿಂದ 2010ರ ತನಕ ಸಿದ್ದರಾಮಯ್ಯ ಪಾತ್ರವೇ ಇಲ್ಲ. 1992ರಲ್ಲಿ ಮುಡಾ ಸ್ವಾಧೀನವನ್ನು 1998ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ. 2004ರಲ್ಳಿ ಸಿಎಂ ಬಾಮೈದನಿಗೆ ಮಾರಾಟ ಆಗಿದೆ. 2005ರಲ್ಲಿ ಕೃಷಿ ಜಮೀನಾಗಿ ಪರಿವರ್ತನೆ ಮಾಡಲಾಗಿದ್ದು, 2010ರಲ್ಲಿ ಸಿಎಂ ಪತ್ನಿಗೆ ದಾನಪತ್ರ ಮಾಡಲಾಗಿದೆ. ಬಹುತೇಕ ಸಮಯದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲಿಲ್ಲ. ಯಾವುದೂ ತರಾತುರಿಯಲ್ಲಿ ನಡೆದಿಲ್ಲ. 2020ರಲ್ಲಿ ಭೂಮಿಗೆ ಪರಿಹಾರವಾಗಿ ನಿವೇಶನಗಳನ್ನು ಹಂಚಲಾಗಿದೆ. 2022ರಲ್ಲಿ ಸೈಟ್‌ಗಳ ಕ್ರಯ ಆಗಿದೆ ಎಂದು ತಿಳಿಸಿದರು.
ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ ಸೇರಿ ಹಲವರ ವಿರುದ್ದ ಅನುಮತಿ ಕೇಳಲಾಗಿದೆ. ಈ ವಿಚಾರಗಳು ಪ್ರಾಸಿಕ್ಯೂಷನ್ ಅನುಮತಿ ನೀಡಲು ಮುಖ್ಯವೇ ಎಂದು ಜಡ್ಜ್ ಪ್ರಶ್ನಿಸಿದರು. ಇದಕ್ಕೆ ಮನು ಸಿಂಘ್ವಿ ಉತ್ತರಿಸಿ, ರಾಜ್ಯಪಾಲರ ಶೋಕಾಸ್ ನೋಟಿಸ್ ಗೆ ಉತ್ತರ ನೀಡಲಾಗಿದೆ. ಅಲ್ಲದೇ ಈ ಬಗ್ಗೆ ಒಂದು ಆಯೋಗ ಸಹ ರಚನೆಯಾಗಿದೆ. ಆ ಕಮಿಟಿ ಈಗಾಗಲೇ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ಟಿ.ಜೆ. ಅಬ್ರಾಹಂ ಒಬ್ಬ ಬ್ಲ್ಯಾಕ್ ಮೇಲರ್, ಆತನಿಗೆ ಸುಪ್ರೀಂ ಕೋರ್ಟ್ ದಂಡ ಹಾಕಿದೆ ಎಂದರು. ಆದರೆ, ಅದೆಲ್ಲಾ ಈಗ ಅವಶ್ಯಕತೆ ಇಲ್ಲ ಎಂದು ಜಡ್ಜ್ ನಾಗಪ್ರಸನ್ನ ಹೇಳಿದರು.
ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ
ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಕ್ಯಾಬಿನೆಟ್ ನಿರ್ಣಯದ ಉದ್ದೇಶ ಸಿಎಂ ಅನ್ನು ರಕ್ಷಿಸುವುದಾಗಿರಬಹುದು. ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ವಿಚಾರದಲ್ಲಿ ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರವಿದೆ ಎಂದು ತಿಳಿಸಿದರು.
ಇದೇ ವೇಳೆ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶಕ್ಕೆ ತಡೆ ನೀಡಬಾರದು ಎಂದು ಮನವಿ ಮಾಡಿದರು. ಈ ವೇಳೆ ಅಭಿಷೇಕ್ ಸಿಂಘ್ವಿ ಮಧ್ಯೆ ಪ್ರವೇಶಿಸಿ, ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಆದೇಶ ಕಾಯ್ಡಿರಿಸಿದೆ. ಆದೇಶ ನೀಡಿದರೆ ಸಮಸ್ಯೆ ಆಗಲಿದೆ ಎಂದರು.
ಈ ವೇಳೆ ಜಡ್ಜ್ ಪ್ರತಿಕ್ರಿಯಿಸಿ, ರಾಜ್ಯಪಾಲರ ಆದೇಶದ ಬಗ್ಗೆ ಸೆಷನ್ಸ್ ಕೋರ್ಟ್ ತೀರ್ಮಾನ ಮಾಡಲು ಸಾಧ್ಯವೇ? ಸಾಂವಿಧಾನಿಕ ವಿಚಾರವನ್ನು ಹೈಕೋರ್ಟ್ ತೀರ್ಮಾನ ಮಾಡಬೇಕು ಎಂದು ಹೇಳಿದರು. ಬಳಿಕ ಅರ್ಜಿ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿದರು.