April 4, 2026
Saturday, April 4, 2026
spot_img

ಪಾಕ್–ಅಫ್ಘಾನ್ ಗಡಿಯಲ್ಲಿ ಮತ್ತೆ ಉದ್ವಿಗ್ನತೆ: ಮಿಲಿಟರಿ ದಾಳಿಗೆ 55 ಸೈನಿಕರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ಗಡಿಭಾಗದಲ್ಲಿ ಮತ್ತೆ ಭಾರಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಪಾಕಿಸ್ತಾನದ ವಾಯುದಾಳಿಗೆ ಪ್ರತಿಯಾಗಿ ಅಫ್ಘಾನ್ ಪಡೆ ನಡೆಸಿದ ಮಿಲಿಟರಿ ದಾಳಿಯಲ್ಲಿ 55 ಪಾಕ್ ಸೈನಿಕರು ಸಾವನ್ನಪ್ಪಿದ್ದು, 23 ಮಂದಿಯನ್ನು ಜೀವಂತವಾಗಿ ಬಂಧಿಸಲಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೆ ಪ್ರತೀಕಾರವಾಗಿ ಶುಕ್ರವಾರ ಬೆಳಿಗ್ಗೆ ಪಾಕಿಸ್ತಾನ ಕಾಬೂಲ್, ಕಂದಹಾರ್ ಹಾಗೂ ಪಕ್ತಿಯಾ ಸೇರಿದಂತೆ ಕೆಲವು ಪ್ರದೇಶಗಳ ಮೇಲೆ ವಾಯುದಾಳಿ ನಡೆಸಿದೆ ಎನ್ನಲಾಗಿದೆ. ಕಾಬೂಲ್‌ನಲ್ಲಿ ಕನಿಷ್ಠ ಮೂರು ಸ್ಫೋಟಗಳ ವರದಿಯಾಗಿದ್ದು, ಸಾವು-ನೋವಿನ ಕುರಿತು ತಕ್ಷಣದ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ವಿವಾದಿತ ಡುರಾಂಡ್ ರೇಖೆ ಗಡಿಯುದ್ದಕ್ಕೂ ಉಭಯ ದೇಶಗಳ ನಡುವೆ ಗುಂಡಿನ ಚಕಮಕಿ ತೀವ್ರಗೊಂಡಿದೆ. ಟೋರ್ಖಾಮ್ ಗಡಿಭಾಗದಲ್ಲಿಯೂ ಭಾರೀ ಸಂಘರ್ಷ ನಡೆದಿರುವ ಮಾಹಿತಿ ಲಭ್ಯವಾಗಿದೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಗಡಿಯ ಸಮೀಪದ ಗ್ರಾಮಗಳನ್ನು ಖಾಲಿ ಮಾಡಿಸಿದೆ.

ಇದನ್ನೂ ಓದಿ:

ಇದಕ್ಕೂ ಮೊದಲು ನಂಗರ್‌ಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳಲ್ಲಿ ಪಾಕ್ ನಡೆಸಿದ ದಾಳಿಗೆ ಪ್ರತಿಯಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನಿ ಸೇನಾ ಕೇಂದ್ರಗಳು ಹಾಗೂ ಔಟ್‌ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡಿದ್ದವು. ಕೆಲವು ಮಿಲಿಟರಿ ನೆಲೆಗಳನ್ನು ವಶಪಡಿಸಿಕೊಂಡಿದ್ದಾಗಿ ತಾಲಿಬಾನ್ ಹೇಳಿಕೊಂಡಿತ್ತು.

ಕಳೆದ ವರ್ಷ ಟರ್ಕಿ ಮಧ್ಯಸ್ಥಿಕೆಯಲ್ಲಿ ಘೋಷಿಸಿದ್ದ ಕದನ ವಿರಾಮದ ಬಳಿಕ ಶಾಂತಿ ನೆಲೆಸಿದ್ದರೂ, ಇತ್ತೀಚಿನ ಬೆಳವಣಿಗೆಗಳಿಂದ ಗಡಿಭಾಗದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !