ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ಬಿದನಗೆರೆ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಕಾರು ಮತ್ತು ಕ್ಯಾಂಟರ್ ಟ್ಯಾಂಕರ್ ನಡುವೆ ನಡೆದ ಭೀಕರ ಡಿಕ್ಕಿಯಿಂದಾಗಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದ ಸೀಬೇಗೌಡ, ಅವರ ಪತ್ನಿ ಶೋಭಾ, ಮಗಳು ವರ್ಣಿತಾ ಹಾಗೂ ಮಗ ಭಾನುಕಿರಣ್ ಗೌಡ ಎಂದು ಗುರುತಿಸಲಾಗಿದೆ. ಕುಟುಂಬದವರು ಭಾನುಕಿರಣ್ ನನ್ನು ಕುಣಿಗಲ್‌ನ ವ್ಯಾಲಿ ಕಾಲೇಜು ಹಾಸ್ಟೆಲ್‌ಗೆ ಬಿಟ್ಟು ಬರುವ ಸಲುವಾಗಿ ಹೊರಟಿದ್ದರು.
ಮೃತರಾದ ಸೀಬೇಗೌಡ ಅವರು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ಆಪ್ತರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಅಪಘಾತದಿಂದಾಗಿ ಅವರ ಮೃತದೇಹಗಳನ್ನು ಮಾಗಡಿಗೆ ಸಾಗಿಸಲಾಗಿದ್ದು, ಅಂತ್ಯಕ್ರಿಯೆಯು ಇಂದೇ ನಡೆಯಲಿದೆ.
ಟ್ಯಾಂಕರ್ ಕುಣಿಗಲ್ ಕಡೆಗೆ ಬರುತ್ತಿದ್ದಾಗ ಬಿದನಗೆರೆ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. ಘಟನೆ ಬಗ್ಗೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣವನ್ನು ತಿಳಿಯಲು ತನಿಖೆ ಮುಂದುವರೆದಿದೆ.