ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಞಾನಭಾರತಿ ರಿಂಗ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಭಸವಾಗಿ ಬಂದ ಟೆಂಪೋ ಡಿವೈಡರ್‌ಗೆ ಡಿಕ್ಕಿ ಹೊಡೆದು ನೇರವಾಗಿ ಬ್ರಿಡ್ಜ್‌ನಿಂದ ಕೆಳಗೆ ಬಿದ್ದಿದೆ. ಬೆಚ್ಚಿ ಬೀಳಿಸುವ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಬ್ಯಾಡರಹಳ್ಳಿ ಕಡೆಯಿಂದ ಕೆಂಗೇರಿ ಕಡೆಗೆ ಸ್ಪೀಡ್ ಆಗಿ ಬರುತ್ತಿದ್ದ ಟೆಂಪೋ ನಿಯಂತ್ರಣ ತಪ್ಪಿ ಬಲಭಾಗದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕ್ಯಾಬಿನ್ ಭಾಗ ಬ್ರಿಡ್ಜ್‌ನಿಂದ ಸಂಪೂರ್ಣವಾಗಿ ತುಂಡಾಗಿ ಕೆಳಗೆ ಬಿದ್ದು ಟೆಂಪೋ ಎರಡು ಭಾಗಗಳಾಗಿದೆ. ಈ ಸಂದರ್ಭ ಡ್ರೈವರ್ ಸೀಟ್‌ನಿಂದ ನೇತಾಡುತ್ತಿದ್ದ ಚಾಲಕ ಕೆಳಗೆ ಬಿದ್ದಿದ್ದು, 35 ವರ್ಷದ ರಾಘವೇಂದ್ರ ಎಂಬುವವರಿಗೆ ತೀವ್ರ ಗಾಯಗಳಾಗಿವೆ.
ಟೆಂಪೋದಲ್ಲಿ ಬೆಡ್‌ಶೀಟ್ ಹಾಗೂ ಬಟ್ಟೆಗಳನ್ನು ಸಾಗಿಸಲಾಗುತ್ತಿತ್ತು. ಘಟನೆಯಾಗುವ ಸಂದರ್ಭದಲ್ಲಿ ವಾಹನದಲ್ಲಿ ಸಲೀಂ ಹಾಗೂ ಫಜಾಯ್ ಎಂಬ ಇಬ್ಬರೂ ಜೊತೆಯಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಇವರು ಸಹ ಗಾಯಗೊಂಡಿದ್ದು, ಮೂವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಕ್ಷಣವೇ ಚಿಕಿತ್ಸೆ ನೀಡಲಾಗಿದೆ.
ಘಟನೆಯ ಬಳಿಕ ಸ್ಥಳಕ್ಕೆ ಜ್ಞಾನಭಾರತಿ ಸಂಚಾರ ಪೊಲೀಸರು ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಅಪಘಾತ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.