ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾದಲ್ಲಿ ಬಸ್ಸುಗಳ ನಡುವೆ ನಡೆದ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದ ಮಿಲ್ಲತ್ ನಗರದ ಯುವಕ ದಾರುಣವಾಗಿ ಮೃತಪಟ್ಟಿದ್ದಾರೆ.
ಈ ಘಟನೆ ನಿನ್ನೆ ಸಂಜೆ ನಡೆದಿದೆ. ಉಳ್ಳಾಲ ಮಿಲ್ಲತ್ ನಗರ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಅಬ್ದುಲ್ ರಾಝಿಕ್ (27) ಮೃತಪಟ್ಟ ಯುವಕ.
ಸೌದಿ ಅರೇಬಿಯಾದಲ್ಲಿದ್ದ ರಾಝಿಕ್ ನಿನ್ನೆ ಸಂಜೆ, ರಾತ್ರಿ ಪಾಳಿ ಕೆಲಸಕ್ಕೆಂದು ತೆರಳುತ್ತಿದ್ದಾಗ ರಾಝಿಕ್ ಪ್ರಯಾಣಿಸುತ್ತಿದ್ದ ಬಸ್ ಗೆ ಮತ್ತೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೊಹಮ್ಮದ್ ಅವರ ಕೊನೆಯ ಪುತ್ರನಾಗಿರುವ ರಾಝಿಕ್ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಮುಗಿಸಿ ವಿದೇಶಕ್ಕೆ ತೆರಳಿದ್ದರು. ಜುಬೈಲ್ ನಲ್ಲಿ ಪೋಲಿಟೆಕ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಅವರು ಕಳೆದ ಜು. 11 ರಂದು ಊರಿಗೆ ಬಂದಿದ್ದರು. ಒಂದು ತಿಂಗಳ ರಜೆ ಮುಗಿಸಿ ಆ. 15 ರಂದು ಎರಡನೇ ಬಾರಿ ಮತ್ತೆ ವಿದೇಶಕ್ಕೆ ತೆರಳಿದ್ದರು.
ರಾಝಿಕ್ ಅವರ ಸಹೋದರ, ಹಾಗೂ ಸಹೋದರಿ ಅನಾರೋಗ್ಯದಿಂದ ಈ ಹಿಂದೆ ಮೃತಪಟ್ಟಿದ್ದರು. ಮೃತ ರಾಝಿಕ್ ತಂದೆ ತಾಯಿ, ಮೂವರು ಸಹೋದರಿಯರು, ಓರ್ವ ಸಹೋದರನನ್ನು ಅಗಲಿದ್ದಾರೆ.