ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಮ್ಮೆ ಸಿಂಹದ ಬಾಯಿಗೆ ಸಿಕ್ಕಿದ್ರೆ ಅದು ಮೃತ್ಯು ಕೂಪದಂತೆ. ಯಾವುದೇ ಕಾರಣಕ್ಕೂ ಬಿಡುವ ಮಾತೇ ಇಲ್ಲ, ಅದು ಮನುಷ್ಯ ಆದರೂ ಸರಿ, ಪ್ರಾಣಿ ಆದರೂ ಸರಿ. ಅಂತೆಯೇ ಹಸುವಿನ ಕುತ್ತಿಗೆಗೆ ಬಾಯಿ ಹಾಕಿದ್ದ ಸಿಂಹದಿಂದ ಧೀರ ರೈತನೊಬ್ಬ ತನ್ನ ಗೋವನ್ನು ಕಾಪಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
@VivekKotdiya ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿರುವ ವೀಡಿಯೊದಲ್ಲಿ ದೊಡ್ಡ ಸಿಂಹವೊಂದು ಹಸುವಿನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದೆ. ಅದರಿಂದ ಪಾರಾಗಲು ಹಸು ಎಲ್ಲ ಪ್ರಯತ್ನ ಮಾಡಿದರೂ ಫಲ ಸಿಗಲಿಲ್ಲ. ಅಷ್ಟರಲ್ಲಿ ಆ ದಾರಿಯಲ್ಲಿ ಹೋಗುತ್ತಿದ್ದ ರೈತ ಧೈರ್ಯದಿಂದ ಸಿಂಹವನ್ನು ಎದುರಿಸಿದ್ದಾರೆ. ರಸ್ತೆ ಬದಿಯಲ್ಲಿದ್ದ ಕಲ್ಲು ತೆಗೆದುಕೊಂಡು ಸಿಂಹದ ಕಡೆಗೆಸೆದು ಹೆದರಿಸಿ ಓಡಿಸಿದರು. ಈ ವಿಡಿಯೋ ನೋಡಿ ಯಾರೋ ಚಿತ್ರಿಸಿದಂತಿದೆ. ಮತ್ತು ಈ ವಿಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿ, ‘ಸೋಮನಾಥ್ ಜಿಲ್ಲೆಯ ಅಲಿದರ್ ಗ್ರಾಮದಲ್ಲಿ ಹಸುವಿನ ಮೇಲೆ ಸಿಂಹ ದಾಳಿ ನಡೆಸಿದಾಗ, ರೈತ ಕಿರಿಟಿನ್ಶ್ ಚೌಹಾಣ್ ಹಸುವನ್ನು ರಕ್ಷಿಸಲು ಧೈರ್ಯ ತೋರಿದರು. ತುಂಬಾ ಧನ್ಯವಾದಗಳು’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
ನೆಟ್ಟಿಗರು ಕೂಡ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. “ಒಬ್ಬ ರೈತ ಧೈರ್ಯದಿಂದ ಹಸುವನ್ನು ಸಿಂಹದಿಂದ ರಕ್ಷಿಸಿದ್ದು ದೊಡ್ಡ ವಿಷಯ.. ಆದರೆ ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ರೈತನಿಗೆ ಏಕೆ ಸಹಾಯ ಮಾಡಲಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ.” ಎಂಬುದು ಹಲವರ ಅಭಿಪ್ರಾಯ.