ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ದಿಟ್ಟ ಉತ್ತರ ನೀಡುತ್ತಿದ್ದು, ಇದರ ನಡುವೆ ಇಂದು ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ಸೇನೆಯ ಚೀಫ್ ಆಫ್ ಜನರಲ್ ಸ್ಟಾಫ್ (CDS) ಜನರಲ್ ಅನಿಲ್ ಚೌಹಾಣ್ ಅವರೊಂದಿಗೆ ಸಭೆ ನಡೆಸಿದರು.
ಏ. 22ರಂದು ಪಾಕಿಸ್ತಾನದ ಉಗ್ರರು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಗುಂಡಿನ ಮಳೆಗೆರೆದು 26 ಪ್ರವಾಸಿಗರನ್ನು ಬಲಿ ಪಡೆದುಕೊಂಡಿದ್ದರು.
ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್‌ಪಿಎಫ್, ಸೇನೆ ಮತ್ತು ಇತರ ಭದ್ರತಾ ಸಿಬ್ಬಂದಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕುವ ಸಲುವಾಗಿ ಶೋಧ ಕಾರ್ಯ ನಡೆಸುತ್ತಿವೆ. ವಿವಿಧ ಕಡೆಗಳಲ್ಲಿ ತನಿಖೆಯನ್ನು ಚರುಕುಗೊಳಿಸಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೂಡ ವಿಚಾರಣೆ ಪ್ರಾರಂಭಿಸಿದೆ. ಈ ಮಧ್ಯೆ ರಕ್ಷಣಾ ಸಚಿವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಈಗಾಗಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಘೋಷಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಯಾವ ರೀತ್ರಿ ಪ್ರತಿಕ್ರಿಯೆ ನೀಡಬೇಕು ಎನ್ನುವುದನ್ನು ಚರ್ಚಿಸಲು ಪಿಎಂ ಮೋದಿ ನೇತೃತ್ವದಲ್ಲಿ ಭದ್ರತಾ ಕ್ಯಾಬಿನೆಟ್ ಸಮಿತಿ ಸಭೆ ನಡೆದಿತ್ತು. ಈಗಾಗಲೇ ಭಾರತ ಸಿಂಧೂ ನದಿ ನೀರಿನ ಒಪ್ಪಂದ ಸ್ಥಗಿತಗೊಳಿಸುವುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.