ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಆಚರಣೆಯಲ್ಲಿ ದೇಶವಾಸಿಗಳು ಮುಳುಗಿರುವಂತೆಯೇ ಪಂಜಾಬ್ ಪೊಲೀಸರು ಉಗ್ರರ ದಾಳಿಯ ಸಂಚನ್ನು ವಿಫಲಗೊಳಿಸಿದ್ದಾರೆ.
ಕೇಂದ್ರ ಏಜೆನ್ಸಿಗಳೊಂದಿಗೆ ನಿಕಟ ಸಮನ್ವಯದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಉಗ್ರರ ಜಾಲವನ್ನು ಪತ್ತೆ ಹಚ್ಚಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ರಾಕೆಟ್ ಚಾಲಿತ ಗ್ರೆನೇಡ್ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಅಮೃತಸರದ ವಡಾಲಿ ನಿವಾಸಿ ಮೆಹಕ್‌ದೀಪ್ ಸಿಂಗ್ ಅಲಿಯಾಸ್ ಮೆಹಕ್ ಮತ್ತು ಅಮೃತಸರದ ಭಾಗಾ ಚಿನಾ ಗ್ರಾಮದ ಆದಿತ್ಯ ಅಲಿಯಾಸ್ ಆದಿ ಎಂದು ಗುರುತಿಸಲಾಗಿದೆ ಎಂದು ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಂಗಳವಾರ ತಿಳಿಸಿದ್ದಾರೆ.
ಆರೋಪಿಗಳು ಪಾಕಿಸ್ತಾನದ ಐಎಸ್‌ಐ ಕಾರ್ಯಕರ್ತ ಮತ್ತು ಪ್ರಸ್ತುತ ಫಿರೋಜ್‌ಪುರ ಜೈಲಿನಲ್ಲಿರುವ ಹರ್‌ಪ್ರೀತ್ ಸಿಂಗ್ ಅಲಿಯಾಸ್ ವಿಕ್ಕಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ ಎಂದು ಯಾದವ್ ಹೇಳಿದ್ದಾರೆ.
ರಾಕೆಟ್ ಚಾಲಿತ ಗ್ರೆನೇಡ್ ನ್ನು ದಾಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿತ್ತು. ಇಡೀ ಜಾಲವನ್ನು ನಾಶಪಡಿಸುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಅಮೃತಸರ (ಗ್ರಾಮೀಣ) ಹಿರಿಯ ಪೊಲೀಸ್ ಅಧೀಕ್ಷಕ ಮಣಿಂದರ್ ಸಿಂಗ್ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿದ್ದು, ಗುಪ್ತಚರ ಮಾಹಿತಿಯ ಮೇರೆಗೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಸರಕುಗಳನ್ನು ತಲುಪಿಸಲು ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ.ಸರಕುಗಳನ್ನು ಸ್ವಿಕರಿಸುತ್ತಿದ್ದವರು ಯಾರೆಂಬುದನ್ನು ಗುರುತಿಸಲು ತನಿಖೆ ನಡೆಯುತ್ತಿದೆ. ಪೊಲೀಸ್ ತಂಡಗಳು ಆರೋಪಿ ಹರ್‌ಪ್ರೀತ್ ಅಲಿಯಾಸ್ ವಿಕ್ಕಿಯನ್ನು ಫಿರೋಜ್‌ಪುರ ಜೈಲಿನಿಂದ ಹೆಚ್ಚಿನ ವಿಚಾರಣೆಗಾಗಿ ಪ್ರೊಡಕ್ಷನ್ ವಾರಂಟ್‌ನಲ್ಲಿ ಕರೆತರಲಿವೆ ಎಂದು ಅವರು ಹೇಳಿದರು.
ಈ ಸಂಬಂಧ ಅಮೃತಸರ ಗ್ರಾಮಾಂತರದ ಪೊಲೀಸ್ ಠಾಣೆ ಘರಿಂಡಾದಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3, 4 ಮತ್ತು 5 ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 113 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

