ಭಯೋತ್ಪಾದನೆ ಸಂಚು: ಖಾಲಿಸ್ತಾನಿ ಉಗ್ರರ ಸಹಚರನ ವಿರುದ್ಧ ಎನ್‌ಐಎ ಚಾರ್ಚ್‌ಶೀಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಪಂಜಾಬ್ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ಖಾಲಿಸ್ತಾನಿ ಉಗ್ರರಾದ ರಿಂಡಾ ಮತ್ತು ಲಾಂಡಾ ಅವರ ಪ್ರಮುಖ ಸಹಚರನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ಸಲ್ಲಿಸಿದೆ .

ಪಂಜಾಬಿನ ತರನ್‌ ತಾರನ್‌ನ ಗುರ್‌ಪ್ರೀತ್ ಸಿಂಗ್ ಅಲಿಯಾಸ್ ಗೋಪಿ ವಿರುದ್ಧ ಮೊಹಾಲಿಯ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿತಿಳಿಸಿದೆ.

ಆರೋಪಿಯು ವಿದೇಶಿ ಮೂಲದ ಭಯೋತ್ಪಾದಕರಾದ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ (ಬಿಕೆಐ) ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾನ ಸಹಚರ ಎಂದು ಎನ್‌ಐಎ ಗುರುತಿಸಿದೆ.

ಈ ವರ್ಷದ ಜನವರಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಆರೋಪಿಯ ಮನೆಯಿಂದ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ವಿರುದ್ಧ ದೋಷಾರೋ‍ಪ ಹೊರಿಸಲಾಗಿದೆ ಎಂದು ತಿಳಿಸಿದೆ.

ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಬಿಕೆಐ ಭಯೋತ್ಪಾದಕರು ರೂಪಿಸಿದ ಸಂಚಿನಲ್ಲಿ ಗುರ್‌ಪ್ರೀತ್‌ನ ಪಾತ್ರ ಇರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಎನ್‌ಐಎ ಹೇಳಿದೆ.

ಆರೋಪಿಯು 2022ರ ಡಿಸೆಂಬರ್‌ನಲ್ಲಿ ಸರಹಾಲಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ ಆರೋಪಿ ಜೈಲಿನಿಂದ ಬಿಡುಗಡೆಯಾದ ಮೇಲೂ, ಜೈಲಿನಲ್ಲಿರುವ ವಿದೇಶಿ ಮೂಲದ ತನ್ನ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೇಳಿದೆ.

ಲಾಂಡಾನ ನಿರ್ದೇಶನದ ಮೇರೆಗೆ ಉದ್ಯಮಿಗಳಿಂದ ಭಾರಿ ಮೊತ್ತದ ಹಣ ಸುಲಿಗೆ ಮಾಡುವ ಮೂಲಕ ಭಾರತದಲ್ಲಿ ಬಿಕೆಐ ಮತ್ತು ಅದರ ಕಾರ್ಯಕರ್ತರಿಗೆ ನಿಧಿ ಸಂಗ್ರಹಿಸಲು ಗುರ್‌ಪ್ರೀತ್ ಸಂಚು ರೂಪಿಸಿದ್ದನ್ನು ಮತ್ತು ಬಡ ಕುಟುಂಬಗಳ ಯುವಕರನ್ನು ಬಿಕೆಐ ಭಯೋತ್ಪಾದಕ ಘಟಕಕ್ಕೆ ನೇಮಿಸಿಕೊಂಡಿರುವುದನ್ನು ತನಿಖೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!