ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಲಿಯನೇರ್ ಎಲಾನ್ ಮಸ್ಕ್ ಏಪ್ರಿಲ್‌ನಲ್ಲಿ ಟ್ವೀಟರ್ ಖರೀದಿಸಲು ಮುಂದಾದಾಗಿನಿಂದ ಅವರ ಇನ್ನೊಂದು ಪ್ರಸಿದ್ಧ ಕಂಪನಿಯಾದ ಟೆಸ್ಲಾ ತನ್ನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ವರದಿಯೊಂದರ ಪ್ರಕಾರ ಟೆಸ್ಲಾ ಸಂಸ್ಥಾಪಕ ಮಸ್ಕ ಟ್ವೀಟರ್ ಖರೀದಿಯಲ್ಲಿ ಆಸಕ್ತಿ ವಹಿಸಿದಾಗಿನಿಂದ ಟೆಸ್ಲಾ ತನ್ನ ಅರ್ಧದಷ್ಟು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಇಲ್ಲಿಯವರೆಗೆ ಟೆಸ್ಲಾ ತನ್ನ ನಿವ್ವಳ ಮೌಲ್ಯದಲ್ಲಿ ಸುಮಾರು 70 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದು ಇದು ಮಸ್ಕ್ ಅವರ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟಕ್ಕೆ ಸಂಕಷ್ಟ ತಂದೊಡ್ಡಿದೆ ಎನ್ನಲಾಗಿದೆ.
ಮಸ್ಕ್ ಟ್ವೀಟರ್ ಖರೀದಿಸಲು ಪ್ರತಿಕೂಲವಾದ ಪ್ರಯತ್ನವನ್ನು ಮಾಡಿದ್ದಾರೆ ಎಂದು ಟ್ವೀಟರ್ ಘೋಷಿಸುವುದಕ್ಕಿಂತ ಒಂದು ದಿನ ಮೊದಲು ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾದ ಷೇರುಗಳು 340.79 ಡಾಲರ್ ನಲ್ಲಿ ವಹಿವಾಟು ನಡೆಸಿದ್ದವು. ಆದರೆ ಅದರಿಂದೀಚೆ ಟೆಸ್ಲಾ ಷೇರುಗಳು ಸುಮಾರು 49 ಪ್ರತಿಶತದಷ್ಟು ಕುಸಿದಿದ್ದು 173.44 ಡಾಲರ್ ಗೆ ತಲುಪಿದೆ. ಟ್ವೀಟರ್ ಖರೀದಿಗೆಂದು ಮಸ್ಕ್ ಸುಮಾರು 20ಬಿಲಿಯನ್ ಡಾಲರ್ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಮಸ್ಕ್ ಟ್ವೀಟರ್ ಖರೀದಿಯ ನಂತರವೂ, ಟ್ವೀಟರ್ ಹಾಗೂ ಸ್ಪೇಸ್ ಎಕ್ಸ್ ಕಂಪನಿಗಳ ನಡುವೆ ಎಲಾನ್ ಮಸ್ಕ್ ಟೆಸ್ಲಾವನ್ನು ಹೇಗೆ ನಿಭಾಯಿಸಲಿದ್ದಾರೆ ಎಂದು ಟೆಸ್ಲಾ ಷೇರುದಾರರು ಕಳವಳ ವ್ಯಕ್ತಪಡಿಸಿದ್ದರು. ಇದು ಮಸ್ಕ್ ಪಾಲಿಗೆ ಅವರ ಜಗತ್ತಿನ ಶ್ರೀಮಂತ ವ್ಯಕ್ತಿ ಎಂಬ ಪಟ್ಟಕ್ಕೆ ಸಂಕಷ್ಟವನ್ನು ತಂದಿಟ್ಟಿದೆ.