ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ವಿರುದ್ಧದ ಅದ್ಭುತ ಆಲ್ರೌಂಡರ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಐಸಿಸಿ ಪ್ರಕಟಿಸಿದ ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ನಲ್ಲಿ ಅಜೇಯ 175 ರನ್ ಗಳಿಸಿದ್ದಲ್ಲದೇ, 9 ವಿಕೆಟ್ ಪಡೆದು ಸರ್ವಶ್ರೇಷ್ಟ ಆಟವಾಡಿದ್ದರು. ಇದರಿಂದ 406 ಅಂಕ ಗಳಿಸಿ ನಂ.1 ಆಲ್ರೌಂಡರ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್. ಅಶ್ವಿನ್ ಒಂದು ಸ್ಥಾನ ಕುಸಿದು 3 ನೇ ಸ್ಥಾನಕ್ಕೆ ಜಾರಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ (4), ಇಂಗ್ಲೆಂಡ್ನ ಬೆನ್ ಸ್ಟೋಕ್ಸ್(5) ನಂತರದ ಸ್ಥಾನದಲ್ಲಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2 ಸ್ಥಾನಗಳ ಏರಿಕೆ ಕಂಡು 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ರೋಹಿತ್ ಶರ್ಮಾ 1 ಸ್ಥಾನ ಕುಸಿದು 6ನೇ ಸ್ಥಾನದಲ್ಲಿದ್ದಾರೆ. ರಿಷಬ್ ಪಂತ್(10) ಅಗ್ರ 10ರೊಳಗೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ನಲ್ಲಿ ಯಾವುದೇ ಮಹತ್ತರ ಬದಲಾವಣೆಯಾಗಿಲ್ಲ. ಅಗ್ರ 10 ಆಟಗಾರರಲ್ಲಿ ಆರ್. ಅಶ್ವಿನ್ 2ನೇ ಸ್ಥಾನ ಕಾಯ್ದುಕೊಂಡರೆ, ಜಸ್ಪ್ರೀತ್ ಬೂಮ್ರಾ 10 ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ನಂ.1 ಸ್ಥಾನದಲ್ಲಿ ಇದ್ದಾರೆ.