ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ದೇವನೂರ ಮಹಾದೇವ ಅವರ ʼಎದೆಗೆ ಬಿದ್ದ ಅಕ್ಷರʼ ಪಾಠವನ್ನು ಪಠ್ಯಕ್ಕೆ ಸೇರಿಸಬೇಕು ಎಂದು ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ (SFI) ಆಗ್ರಹಿಸಿದೆ.
ರಾಜ್ಯ ಸರ್ಕಾರ ಆರರಿಂದ ಹತ್ತನೇ ತರಗತಿವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕೆಲವು ಪಾಠಗಳನ್ನು ಸೇರ್ಪಡೆ ಮಾಡಲು ಸಮಿತಿ ರಚಿಸಿದೆ. ಇದನ್ನು ಎಸ್ಎಫ್ಐ ರಾಜ್ಯ ಸಮಿತಿಯು ಸ್ವಾಗತಿಸಿದೆ.
ಹಿಂದಿನ ವರ್ಷ ಬಿಜೆಪಿ ಸರ್ಕಾರ ಕೈ ಬಿಟ್ಟಿರುವ ಬಹುತೇಕ ಎಲ್ಲ ಪಾಠಗಳನ್ನು ಕಾಂಗ್ರೆಸ್ ಸರ್ಕಾರ ಮರುಸೇರ್ಪಡೆ ಮಾಡುತ್ತಿದೆ. ಆದರೆ 10ನೇ ತರಗತಿ ಪ್ರಥಮ ಭಾಷೆಯಾದ ಕನ್ನಡ ಗದ್ಯ ಭಾಗದಲ್ಲಿ ರಾಜ್ಯದ ಹಿರಿಯ ಸಾಹಿತಿ ದೇವನೂರ ಮಹಾದೇವರ ʼಎದೆಗೆ ಬಿದ್ದ ಅಕ್ಷರʼ ಎಂಬ ಪಾಠವು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ತಿದ್ದುಪಡಿ ಅಥವಾ ಸೇರ್ಪಡೆ ಪಟ್ಟಿಯಲ್ಲಿ ಇಲ್ಲದಿರುವುದು ನೋವಿನ ವಿಷಯವಾಗಿದೆ ಎಂದು ಸಂಘಟನೆ ಹೇಳಿದೆ.
ರಾಜ್ಯದ ಮುಖ್ಯಮಂತ್ರಿ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸಚಿವರು ಇದರ ಬಗ್ಗೆ ಗಮನಹರಿಸಿ 10ನೇ ತರಗತಿ ಕನ್ನಡ ಪ್ರಥಮ ಭಾಷೆ ವಿಷಯದಲ್ಲಿ ಅವರ ಪಾಠ ಸೇರಿಸಬೇಕು ಎಂದು ಸಂಘಟನೆ ರಾಜ್ಯಾಧ್ಯಕ್ಷ ಅಮರೇಶ ಕಡಗದ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.