ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 15 ರಂದು ನಡೆಯಲಿರುವ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ನಡುವೆ ಮೈತ್ರಿ ಏರ್ಪಟ್ಟಿದೆ. 20 ವರ್ಷಗಳ ನಂತರ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ‘ಮರಾಠ’ ಹೆಸರಿನಲ್ಲಿ ಒಂದಾಗಿದ್ದಾರೆ.
ವರ್ಲಿಯ ಹೋಟೆಲ್ನ ಬ್ಲೂ ಸೀನಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಟಿ ನಡೆಸಿ ಉಭಯ ನಾಯಕರು ತಮ್ಮ ನಡುವಿನ ಮೈತ್ರಿಯನ್ನು ಘೋಷಿಸಿದರು.
ಉದ್ಧವ್ ಠಾಕ್ರೆ, “ನಾವು ಒಟ್ಟಿಗೆ ಸೇರಿ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಎದುರಿಸಲಿದ್ದೇವೆ. ಬಿಜೆಪಿ ವಿರೋಧಿ ಪಕ್ಷಗಳು ನಮ್ಮ ಜೊತೆ ಕೈಜೋಡಿಸಬಹುದು” ಎಂದು ಕರೆ ನೀಡಿದರು.
ಜನವರಿ 15 ರಂದು ಚುನಾವಣೆ ನಡೆಯಲಿರುವ ನಾಸಿಕ್, ಮುಂಬೈ ಸೇರಿದಂತೆ ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆಯಲ್ಲಿ ಸೀಟು ಹಂಚಿಕೆ ಅಂತಿಮಗೊಂಡಿದೆ. ಇತರ ಸ್ಥಳೀಯ ಸಂಸ್ಥೆಗಳಲ್ಲಿ ಎರಡೂ ಪಕ್ಷಗಳ ನಡುವೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಬಳಿಕ ಮಾತನಾಡಿದ ರಾಜ್ ಠಾಕ್ರೆ, ‘ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮರಾಠಿಗ ಈ ಬಾರಿ ಮೇಯರ್ ಆಗಲಿದ್ದಾರೆ’ ಎಂದು ಹೇಳಿದರು. ಆದರೆ, ಸಹೋದರರ ಮಧ್ಯೆ ಸೀಟು ಹಂಚಿಕೆ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಿಲ್ಲ.

