ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ನಟನೆಯ ʻಕಾಂತಾರʼ ಸಿನಿಮಾ ಎಷ್ಟು ದೊಡ್ಡ ಯಶಸ್ಸು ಕಂಡಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದೇ ತಡ ಎಲ್ಲಿ ನೋಡಿದರೂ ಈ ಸಿನಿಮಾದ್ದೇ ಮಾತುಕತೆ. ಬಳಿಕ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಭರ್ಜರಿ ಯಶಸ್ಸು ಕಂಡಿದೆ. 20 ಕೋಟಿಯಲ್ಲಿ ತಯಾರಾದ ಈ ಸಿನಿಮಾ ಸುಮಾರು 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಪ್ರೇಕ್ಷಕರ ಜೊತೆಗೆ ಸ್ಟಾರ್ ಸೆಲೆಬ್ರಿಟಿಗಳು ಕೂಡ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದುವರೆಗೂ ಯಾವುದೇ ತಕರಾರಿಲ್ಲದೆ ಸಾಗಿ ಸಿನಿಮಾಕ್ಕೆ ಖಾಸಗಿ ಮ್ಯೂಸಿಕ್ ಬ್ಯಾಂಡ್ ವೊಂದು ಶಾಕ್ ಕೊಟ್ಟಿದೆ. ಈ ಸಿನಿಮಾದಲ್ಲಿ ಬಳಸಿರುವ ಸಂಗೀತ ನಮ್ಮದು, ಲೀಗಲ್ ನೋಟಿಸ್ ಕಳುಹಿಸುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ‘ತೈಕ್ಕುಡಂ ಬ್ರಿಡ್ಜ್’ ಎಂಬ ಖಾಸಗಿ ಮ್ಯೂಸಿಕ್ ಬ್ಯಾಂಡ್ ಈ ಹಿಂದೆ ಅವರು ʻನವರಸಂʼ ಎಂಬ ಆಲ್ಬಂ ಅನ್ನು ಬಿಡುಗಡೆ ಮಾಡಿದರು. ನಮ್ಮ ಈ ಸಂಗೀತವು ಕಾಂತಾರ ಚಿತ್ರದ ಅತ್ಯಂತ ಜನಪ್ರಿಯ ʻವರಾಹ ರೂಪಂʼ ಸಂಗೀತವನ್ನು ಹೋಲುತ್ತದೆ ಎಂದು ತೈಕ್ಕುಡಂ ಬ್ರಿಡ್ಜ್ ತಂಡ ಆರೋಪಿಸಿದೆ.
ತೈಕ್ಕುಡಂ ಬ್ರಿಡ್ಜ್ ಅಧಿಕೃತವಾಗಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, “ನಾವು ನಮ್ಮ ಪ್ರೇಕ್ಷಕರಿಗೆ ಒಂದೇ ವಿಷಯವನ್ನು ಹೇಳುತ್ತಿದ್ದೇವೆ. ಕಾಂತಾರ ಚಿತ್ರಕ್ಕೂ ನಮಗೂ ಸಂಬಂಧವಿಲ್ಲ. ಆದರೆ, ನಮ್ಮ ನವರಸಂ ಮತ್ತು ಕಾಂತಾರದ ವರಾಹ ರೂಪ ಹಾಡುಗಳಲ್ಲಿನ ಸಂಗೀತವು ಬಹುತೇಕ ಒಂದೇ ಆಗಿರುತ್ತದೆ. ಇದು ಹಕ್ಕುಸ್ವಾಮ್ಯ ಕಾನೂನುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ನಕಲು ಮತ್ತು ಸ್ಫೂರ್ತಿ ಪಡೆದು ಮಾಡಿದ್ದೇವೆ ಎಂಬುದಕ್ಕೆ ದೊಡ್ಡ ವ್ಯತ್ಯಾಸವಿದೆ. ಅದರಲ್ಲಿನ ಸಂಗೀತ ಸಂಪೂರ್ಣವಾಗಿ ನಮ್ಮದು. ಅದಕ್ಕೇ ಈ ಬಗ್ಗೆ ಕಾನೂನು ಕ್ರಮ ಜರುಗಿಸಲಿದ್ದು, ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸುತ್ತಿದ್ದೇವೆ,” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕರಿಗೆ ಟ್ಯಾಗ್ ಮಾಡಲಾಗಿದೆ.