ಹೊಸದಿಗಂತ ಡಿಜಿಟಲ್ ಡೆಸ್ಕ್:
ಥಾರ್ ವಾಹನ ನಡೆಸಿದ ಅವಾಂತರಕ್ಕೆ ಅಮಾಯಕ ಜೀವವೊಂದು ಬಲಿಯಾದ ಘಟನೆ ಮಂಗಳೂರು ಸಮೀಪದ ಉಳ್ಳಾಲದಲ್ಲಿ ನಡೆದಿದೆ.
ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಥಾರ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಕ್ರ ಸಿಡಿದು ಮುಂಬದಿ ಚಲಿಸುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ಡಿವೈಡರ್ ಗೆ ಬಡಿದು ಸಾವನ್ನಪ್ಪಿದ್ದಾರೆ.
ಕೊಲ್ಯ ನಿವಾಸಿ ಸಂತೋಷ್ ಬೆಳ್ಚಾಡ ( 45) ಮೃತರು.
ಈ ಘಟನೆ ರಾ.ಹೆ 66 ರ ಕೊಲ್ಯ ಬ್ರಹ್ಮಶ್ರೀ ಮಂದಿರ ಎದುರುಗಡೆ ಸಂಭವಿಸಿದೆ. ಜೀಪಿನಲ್ಲಿದ್ದ ಯುವಕರು ಗಾಂಜಾ ನಶೆಯಲ್ಲಿದ್ದು, ಅವರ ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂತೋಷ್ ಬಾಳೆಹಣ್ಣು ವ್ಯಾಪಾರಿಯಾಗಿದ್ದು, ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಮಂಗಳೂರು ಕಡೆಯಿಂದ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಲ್ಲಿದ್ದ ಜೀಪ್ ಎದುರಿನಲ್ಲಿ ಧರ್ಮಸ್ಥಳದಿಂದ ಕಾಞಂಗಾಡ್ ಗೆ ಕುಟುಂಬ ಸಮೇತರಾಗಿ ತೆರಳುತ್ತಿದ್ದ ಬಲೇನೋ ಕಾರಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಆಯತಪ್ಪಿದ ಕಾರು ಎದುರಿನಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಬೈಕ್ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಬೈಕ್ ಡಿವೈಡರ್ ಗೆ ಬಡಿದ ಪರಿಣಾಮ ಸಂತೋಷ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ತೆರಳುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.
ವಿವಾಹಿತರಾಗಿದ್ದ ಸಂತೋಷ್ ಹೆತ್ತವರು, ಇಬ್ಬರು ಹೆಣ್ಮಕ್ಕಳು ಹಾಗೂ ಪತ್ನಿ ಇರುವ ಕುಟುಂಬದ ಆಧಾರಸ್ತಂಭವಾಗಿದ್ದರು.
ಗಾಂಜಾ ನಶೆಯಿಂದ ಘಟನೆ, ಶಾಶ್ವತ ಸಂಚಾರಿ ಪೊಲೀಸ್, ಬ್ಯಾರಿಕೇಡ್ ಅಳವಡಿಸಲು ಒತ್ತಾಯ
ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಕೊಲ್ಯ ನಿವಾಸಿಗಳು ತಕ್ಷಣವೇ ಸ್ಥಳದಲ್ಲಿ ಸಂಚಾರಿ ಪೊಲೀಸರು, ಬ್ಯಾರಿಕೇಡ್ ಅಳವಡಿಸಲು ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಲೇ ಇದೆ. ಪೊಲೀಸರು ಯಾವುದೇ ಕ್ರಮ ವಹಿಸುತ್ತಿಲ್ಲ. ಇಂದು ನಡೆದಿರುವ ಅಪಘಾತಕ್ಕೆ ಗಾಂಜಾ ನಶೆಯೇ ಕಾರಣ. ಜೀಪಿನಲ್ಲಿದ್ದ ಮೂವರು ಯುವಕರು ನಶೆಯಲ್ಲಿದ್ದರಿಂದ ಘಟನೆ ನಡೆದಿದೆ. ತಕ್ಷಣವೇ ಮೂವರನ್ನು ತನಿಖೆಗೆ ಒಳಪಡಿಸಿ ಮೃತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ಆಗ್ರಹವನ್ನು ಸ್ಥಳೀಯ ಶೇಖರ್ ಕನೀರುತೋಟ ಮಾಡಿದ್ದಾರೆ.