ಹೊಸದಿಗಂತ ಡಿಜಿಟಲ್ ಡೆಸ್ಕ್:
50 ವರ್ಷಗಳಿಂದ ಸಿನಿಪ್ರಿಯರಿಗೆ ಮನರಂಜನೆ ನೀಡುತ್ತಿದ್ದ ಇಲ್ಲಿನ ವಿದ್ಯಾರಣ್ಯಪುರಂನಲ್ಲಿರುವ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿರವನ್ನು ಮಂಗಳವಾರ ನೆಲಸಮಗೊಳಿಸಲಾಯಿತು. ಇದನ್ನು ಕಣ್ಣಾರೆ ಕಂಡ ಮೈಸೂರಿನ ಜನ ಭಾವುಕರಾದರು.
ಹಾಲಿವುಡ್, ಬಾಲಿವುಡ್ ಸೇರಿದಂತೆ ಖ್ಯಾತ ನಟ-ನಟಿಯರು ನಟಿಸಿದ್ದ, ಕನ್ನಡದ ಹಲವಾರು ಜನಪ್ರಿಯ ಚಿತ್ರಗಳ ಪ್ರದರ್ಶನ ಕಂಡ, ಸಿನಿ ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿದ್ದ ಅವಳಿ ಚಿತ್ರಮಂದಿರ ಕಟ್ಟಡ ಮಾಯವಾಗಿ ಇನ್ನುಮುಂದೆ ವಾಣಿಜ್ಯ ಸಂಕೀರ್ಣವಾಗಿ ತಲೆ ಎತ್ತಲಿದೆ.
ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಚಿತ್ರಮಂದಿರದಲ್ಲಿ ಕಳೆದ ಐದು ದಶಕಗಳಿಂದ ಸಾವಿರಾರು ಸಿನಿಮಾಗಳು ಪ್ರದರ್ಶನಗೊಂಡಿವೆ. ಈ ಮೂಲಕ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಕ್ಕಿದೆ. ಹಾಲಿವುಡ್, ಬಾಲಿವುಡ್ ಸೇರಿದಂತೆ ಶಂಕರ್‌ನಾಗ್, ಟೈಗರ್ ಪ್ರಭಾಕರ್, ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ಕುಮಾರ್, ಚಿರಂಜೀವಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳ ಜನಪ್ರಿಯ ಸಿನಿಮಾಗಳು ಪ್ರದರ್ಶನ ಕಂಡಿದ್ದವು.
ಟೈಟಾನಿಕ್, ಜುರಾಸಿಕ್ ಪಾರ್ಕ್ ಸೇರಿದಂತೆ ಜಾಕಿಚಾನ್ ನಟನೆಯ ಬಹುತೇಕ ಇಂಗ್ಲಿಷ್ ಚಿತ್ರಗಳು ಪ್ರದರ್ಶನವಾಗಿ ಪ್ರೇಕ್ಷಕರ ಗಮನ ಸೆಳೆದಿದ್ದವು. ಕೋವಿಡ್ ನಂತರದಲ್ಲಿ ಆರ್ಥಿಕ ಸಂಕಷ್ಟ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಾರದೇ ಇರುವುದರಿಂದ ನಲುಗಿ ಹೋಗಿದ್ದ ಚಿತ್ರಮಂದಿರಗಳು ಮತ್ತೆ ಹಳೆಯ ದಿನಗಳ ವೈಭವಕ್ಕೆ ಮರಳಲೇ ಇಲ್ಲ. ಈ ಎಲ್ಲ ಕಾರಣಗಳಿಂದ ಥಿಯೇಟರ್ ನೆಲಸಮ ಮಾಡಿ ಇದೀ ವಾಣಿಜ್ಯ ಸಂಕೀರ್ಣ ತಲೆಯೆತ್ತಲಿದೆ .